ಬೆಂಗಳೂರು, ಫೆ.04 (DaijiworldNews/AA): ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಕಳೆದ ವರ್ಷಕ್ಕಿಂತ ಈ ಬಾರಿ ಶೇಕಡ 10ರಷ್ಟು ಹೆಚ್ಚು ತೆರಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಲ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 2025-26ನೇ ಆರ್ಥಿಕ ವರ್ಷದಲ್ಲಿ 51 ಸಾವಿರದ 876 ಕೋಟಿ ರೂಪಾಯಿ ತೆರಿಗೆಯನ್ನು ಹಂಚಿಕೆ ಮಾಡಲಾಗಿದೆ. 2014-15ರಲ್ಲಿ 24 ಸಾವಿರದ 789 ಕೋಟಿಯಷ್ಟಿತ್ತು. ಈ ಪ್ರಮಾಣ ಶೇಕಡ 108ರಷ್ಟು ಅಧಿಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕರ್ನಾಟಕಕ್ಕೆ ಹಲವು ಕೊಡುಗೆಗಳು ಲಭಿಸಿದ್ದು, ಅಭೂತಪೂರ್ವ ಬೆಳವಣಿಗೆಗೆ ಸಾಕ್ಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
15ನೇ ಹಣಕಾಸು ಆಯೋಗದಿಂದ ಕರ್ನಾಟಕ ಪಾಲಿನ ತೆರಿಗೆ ಪಾಲು ಶೇಕಡ 3.64ರಷ್ಟು ನಿಗಧಿಪಡಿಸಲಾಗಿದೆ. 2014ರಿಂದ 2024ರವರೆಗೆ ಎನ್ ಡಿಎ ನೇತೃತ್ವದ ಸರ್ಕಾರವು ಕರ್ನಾಟಕಕ್ಕೆ 2 ಲಕ್ಷದ 85ಸಾವಿರದ 452 ಕೋಟಿ ರೂಪಾಯಿಯನ್ನು ಹಂಚಿಕೆ ಮಾಡಿದೆ. ಇದೇ ರೀತಿ ರೈಲ್ವೆ, ಸ್ಟಾರ್ಟ್ ಅಪ್ ಗಳ ಬೆಳವಣಿಗೆಗೂ ಹಲವು ಸವಲತ್ತುಗಳನ್ನು ಒದಗಿಸಿದೆ ಎಂದು ಪೋಸ್ಟ್ ಮಾಡಿದ್ದಾರೆ.