ಬೆಂಗಳೂರು, ನ.29(DaijiworldNews/AK): ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಭರದಲ್ಲಿ ರಾಜ್ಯ ಸರ್ಕಾರ ವಿಕಲಚೇತನರಿಗೆ ಅನುದಾನ ಕಡಿತ ಮಾಡಿದ ಆರೋಪಕ್ಕೆ ಒಳಗಾಗಿದೆ.
ವಿಕಲಚೇತನರ ಅನುದಾನ ಕಡಿತ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಆಕ್ರೋಶ ಹೊರಹಾಕಿದೆ. ಕಳೆದ ವರ್ಷಕ್ಕಿಂತ ವಿಕಲಚೇತರ ಅನುದಾನದಲ್ಲಿ 80% ರಷ್ಟು ಹಣ ಕಡಿತ ಮಾಡಲಾಗಿದೆ ಎಂದು ಬಿಜೆಪಿ ಆಪಾದಿಸಿದೆ.
ಈ ವಿಚಾರವಾಗಿ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಎಕ್ಸ್ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಕಳೆದ ವರ್ಷ ಸರ್ಕಾರ ವಿಕಲಚೇನರ ವಿವಿಧ ಯೋಜನೆಗಳಿಗೆ 53 ಕೋಟಿ ರೂ. ಅನುದಾನ ಮೀಸಲು ಇಡಲಾಗಿತ್ತು. ಆದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಬರೀ 10 ಕೋಟಿ ರೂ. ಅನುದಾನ ಮಾತ್ರ ಹಂಚಿಕೆ ಮಾಡಲಾಗಿದೆ. ಇದು ನಿಜಕ್ಕೂ ದುರದೃಷ್ಟಕರ. ಇದು ದಿವ್ಯಾಂಗರಿಗೆ ಆಗುತ್ತಿರುವ ಅನ್ಯಾಯ. ಇದರಿಂದ ಅವರ ಅಗತ್ಯ ಸೇವೆಗಳಿಗೆ ಧಕ್ಕೆ ಆಗಲಿದೆ. ಮೀಸಲಿಟ್ಟ ನಿಧಿಯನ್ನು ಅವರಿಗಾಗಿ, ಅವರ ಸೇವೆಗಾಗಿ ಉಪಯೋಗಿಸಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ.