ಢಾಕಾ, ನ.29(DaijiworldNews/AA): ತನ್ನ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ನಡುವೆಯೂ ಬಾಂಗ್ಲಾದೇಶ ಪಾಕಿಸ್ತಾನದಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡಿದೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ಬಾಂಗ್ಲಾವನ್ನು ತೊರೆದ ಬೆನ್ನಲ್ಲೇ ನೊಬೆಲ್ ಪ್ರಶಸ್ತಿ ವಿಜೇತ ಮೊಹಮ್ಮದ್ ಯೂನಸ್ ಮಧ್ಯಂತರ ಸರ್ಕಾರದ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು ಅಧಿಕಾರ ವಹಿಸಿಕೊಂಡ ತಕ್ಷಣ, ಬಾಂಗ್ಲಾದೇಶ ಸೇನೆಯು ಮದ್ದುಗುಂಡುಗಳು ಮತ್ತು ರೈಫಲ್ ಗೆ ಬೇಡಿಕೆ ಇಟ್ಟಿತ್ತು. ಬಾಂಗ್ಲಾದೇಶದಲ್ಲಿ ಉಪಸ್ಥಿತರಿರುವ ಸಲಹೆಗಾರರು ಭಾರತದ ಬದಲಿಗೆ ಬೇರೆ ದೇಶದಿಂದ ಯುದ್ಧಸಾಮಗ್ರಿಗಳನ್ನು ಖರೀದಿ ಮಾಡಲು ಸಲಹೆ ನೀಡಿದರು. ಇದೇ ವೇಳೆಗೆ ಪಾಕಿಸ್ತಾನ ಬೆಂಬಲಿಗರು ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಬಗ್ಗೆ ಸಲಹೆ ನೀಡಿದ್ದಾರೆ.
ಇದರ ಬೆನ್ನಲ್ಲೇ ಪಾಕಿಸ್ತಾನವು ಮೊದಲಿಗೆ ಬಾಂಗ್ಲಾದೇಶದ ಮುಂದೆ ಹಣದ ಬೇಡಿಕೆ ಇಟ್ಟಿದ್ದು, ಬಾಂಗ್ಲಾ ಮೊದಲು ಹಣವನ್ನು ನೀಡಲಿ, ನಂತರ ನಾವು ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತೇವೆ ಎಂದು ಹೇಳಿದೆ. ಅದೇ ವೇಳೆಯಲ್ಲಿ, ಬಾಂಗ್ಲಾದೇಶ ನೀಡಿದ ಹಣವನ್ನು ತೆಗೆದುಕೊಳ್ಳುವಂತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ತನ್ನ ಆಡಳಿತಕ್ಕೆ ಸಲಹೆ ನೀಡಿದೆ. 1971ರ ನಂತರ ಇದೇ ಮೊದಲ ಬಾರಿಗೆ ಬಾಂಗ್ಲಾದೇಶವು ನೇರವಾಗಿ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುತ್ತಿರುವುದು.
ಬಾಂಗ್ಲಾದೇಶವು ತನ್ನ ಅಗತ್ಯವನ್ನು ಪೂರೈಸಲು ಸುಮಾರು 50 ಸಾವಿರ ಸುತ್ತು ಮದ್ದುಗುಂಡುಗಳು, ೩ ಸಾವಿರ ಟ್ಯಾಂಕ್ ಮದ್ದುಗುಂಡುಗಳು, 50 ಟನ್ ಆರ್ಡಿಎಕ್ಸ್ ಸ್ಫೋಟಕ ಜೊತೆಗೆ 20 ಸಾವಿರ ಸುತ್ತು ಮದ್ದುಗುಂಡುಗಳನ್ನು ಪೂರೈಸುವಂತೆ ಪಾಕಿಸ್ತಾನಕ್ಕೆ ಕೇಳಿದೆ ಎನ್ನಲಾಗಿದೆ.