ಮುಂಬೈ, ನ.27 (DaijiworldNews/AK): ಭಾರತದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಕಿರಿಯ ಪುತ್ರ ವೇದಾಂತ್ ಸೆಹ್ವಾಗ್ ಇದೀಗ ತಮ್ಮ ಬೌಲಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಕೂಚ್ ಬೆಹಾರ್ ಟ್ರೋಫಿ ಎಲೈಟ್ ಟೂರ್ನಿಯಲ್ಲಿ ದೆಹಲಿ ಅಂಡರ್-19 ತಂಡದ ಪರ ಆಡುತ್ತಿರುವ ವೇದಾಂತ್, ಪಂಜಾಬ್ ಅಂಡರ್-19 ವಿರುದ್ಧ ಅಮೋಘ ಪ್ರದರ್ಶನ ನೀಡಿದ್ದಾರೆ. ಒಂದೇ ಇನ್ನಿಂಗ್ಸ್ನಲ್ಲಿ 7 ವಿಕೆಟ್ ಕಬಳಿಸುವ ಮೂಲಕ ಎದುರಾಳಿ ತಂಡದ ಬ್ಯಾಟಿಂಗ್ ಪಡೆಯನ್ನು ಧೂಳೀಪಟ ಮಾಡಿದ್ದಾರೆ.
ಈ ಪಂದ್ಯದಲ್ಲಿ ಮತ್ತೊಂದು ವಿಶೇಷವೂ ಇದೆ. ವೀರೇಂದ್ರ ಸೆಹ್ವಾಗ್ ಅವರ ಹಿರಿಯ ಪುತ್ರ ಆರ್ಯವೀರ್ ಸೆಹ್ವಾಗ್ ಕೂಡ ದೆಹಲಿ ಅಂಡರ್-19 ತಂಡದ ಪರ ಆಡುತ್ತಿದ್ದು, ತಂಡದ ನಾಯಕನ ಜವಾಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಒಂದೇ ಪಂದ್ಯದಲ್ಲಿ ಸೆಹ್ವಾಗ್ ಕುಟುಂಬದ ಇಬ್ಬರು ಪುತ್ರರು ಕ್ರಿಕೆಟ್ ಮೈದಾನದಲ್ಲಿ ಗಮನ ಸೆಳೆದಿದ್ದಾರೆ.