ಮುಂಬೈ,ನ.23 (DaijiworldNews/ AK): 2018ರಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯಲ್ಲಿ ನಡೆದಿದ್ದ ಬಾಲ್ ಟ್ಯಾಂಪರಿಂಗ್ ಪ್ರಕರಣ ಇದೀಗ ಮತ್ತೆ ಚರ್ಚೆಗೆ ಕಾರಣವಾಗಿದೆ. ‘ಸ್ಯಾಂಡ್ಪೇಪರ್ ಗೇಟ್’ ಎಂದೇ ಪ್ರಸಿದ್ಧಿಯಾಗಿರುವ ಈ ವಿವಾದದ ಬಗ್ಗೆ ಆಸ್ಟ್ರೇಲಿಯಾದ ಕ್ರಿಕೆಟಿಗರಾದ ಉಸ್ಮಾನ್ ಖವಾಜಾ ಮತ್ತು ಕ್ಯಾಮರೂನ್ ಬ್ಯಾನ್ಕ್ರಾಫ್ಟ್ ಇತ್ತೀಚೆಗೆ ನೀಡಿರುವ ಹೇಳಿಕೆಗಳಿಗೆ ಎಬಿ ಡಿವಿಲಿಯರ್ಸ್ ಪ್ರತಿಕ್ರಿಯಿಸಿದ್ದು, ‘ಆಸ್ಟ್ರೇಲಿಯಾ ತಂಡದ ಪ್ರತಿಯೊಬ್ಬ ಆಟಗಾರನಿಗೂ ಬಾಲ್ ಟ್ಯಾಂಪರಿಂಗ್ ಬಗ್ಗೆ ತಿಳಿದಿತ್ತು. ಈ ವಿಚಾರದಲ್ಲಿ ನನಗೆ ಶೇ.100ರಷ್ಟು ಖಚಿತತೆ ಇದೆ ಎಂದಿದ್ದಾರೆ.

2018ರ ಕೇಪ್ಟೌನ್ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ಡಿವಿಲಿಯರ್ಸ್, ಮೊದಲ ಇನ್ನಿಂಗ್ಸ್ನಲ್ಲಿ 64 ಹಾಗೂ ಎರಡನೇ ಇನ್ನಿಂಗ್ಸ್ನಲ್ಲಿ 63 ರನ್ ಗಳಿಸಿದ್ದರು. ಅವರ ಪ್ರಕಾರ, ಬಾಲ್ ಟ್ಯಾಂಪರಿಂಗ್ ಕೇವಲ ಕೇಪ್ಟೌನ್ ಟೆಸ್ಟ್ನಲ್ಲಿ ಮಾತ್ರ ನಡೆದಿರಲಿಲ್ಲ. ಸರಣಿಯ ಮೊದಲ ಪಂದ್ಯವಾದ ಡರ್ಬನ್ ಟೆಸ್ಟ್ನಲ್ಲೂ ಚೆಂಡಿನ ವಿರೂಪ ನಡೆದಿದೆ ಎಂದು ಅವರು ಹೇಳಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಡಿವಿಲಿಯರ್ಸ್, ‘ನಾನು ಯಾರನ್ನೂ ವೈಯಕ್ತಿಕವಾಗಿ ಗುರಿಯಾಗಿಸಿಕೊಂಡು ಮಾತನಾಡಲು ಬಯಸುವುದಿಲ್ಲ. ಹಾಗೆಯೇ ಒಬ್ಬರು ಸರಿ, ಮತ್ತೊಬ್ಬರು ತಪ್ಪು ಎಂದೂ ಹೇಳುತ್ತಿಲ್ಲ. ಆದರೆ ಕೆಲವು ವಿಚಾರಗಳ ಬಗ್ಗೆ ನನಗೆ ಬಲವಾದ ಅಭಿಪ್ರಾಯಗಳಿವೆ. ಅವುಗಳನ್ನು ಇಲ್ಲಿ ಹಂಚಿಕೊಳ್ಳಬಹುದು. ಉಸ್ಮಾನ್ ತಮ್ಮ ಪುಸ್ತಕ ಬಿಡುಗಡೆ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ 2026ರಲ್ಲಿ ಈ ವಿಚಾರವನ್ನು ಮತ್ತೆ ಪ್ರಸ್ತಾಪಿಸಿರುವ ಸಮಯ ಮಾತ್ರ ಸ್ವಲ್ಪ ವಿಚಿತ್ರವಾಗಿದೆ’ ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
ಸ್ಯಾಂಡ್ಪೇಪರ್ ಬಳಸಿದ್ದು ಯಾರಿಗೆ ಗೊತ್ತಿತ್ತು ಎಂಬ ಚರ್ಚೆ ನಡೆಯುತ್ತಿದೆ. ಆದರೆ ಅಕ್ರಮವಾಗಿ ಏನಾದರೂ ಮಾಡಿ ನಿಯಮ ಮೀರುವ ನಿರ್ಧಾರವನ್ನು ತಂಡದ ಪ್ರತಿಯೊಬ್ಬರೂ ಮೊದಲೇ ತಿಳಿದಿದ್ದರು. ಈ ಪ್ರಮುಖ ವಿಚಾರವನ್ನೇ ಎಲ್ಲರೂ ಮರೆತಿದ್ದಾರೆ. ಚೆಂಡಿನ ಸ್ವರೂಪ ಬದಲಿಸಲು ಯಾವ ವಸ್ತುವನ್ನು ಬಳಸಿದರು ಎಂಬುದರ ಬಗ್ಗೆ ನಾವೇಕೆ ಇಷ್ಟೊಂದು ಚರ್ಚೆ ಮಾಡಬೇಕು? ಮೈದಾನದಲ್ಲಿ ಅಕ್ರಮ ಎಸಗಲು ಮೊದಲೇ ಯೋಜನೆ ರೂಪಿಸಲಾಗಿತ್ತು ಎಂಬುದೇ ಇಲ್ಲಿ ಮುಖ್ಯವಾದ ವಿಚಾರ. ಹೀಗಾಗಿ ಆಸ್ಟ್ರೇಲಿಯಾದ ಪ್ರತಿಯೊಬ್ಬ ಆಟಗಾರನಿಗೂ ಈ ಬಗ್ಗೆ ತಿಳಿದಿತ್ತು. ಈ ವಿಚಾರದಲ್ಲಿ ನನಗೆ ಶೇ.100ರಷ್ಟು ಖಚಿತತೆ ಇದೆ’ ಎಂದು ಡಿವಿಲಿಯರ್ಸ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.