ಮುಂಬೈ, ಅ.13 (DaijiworldNews/AA): ವಿರಾಟ್ ಕೊಹ್ಲಿ ಒಬ್ಬರೇ ಭಾರತಕ್ಕೆ 2027ರ ಏಕದಿನ ವಿಶ್ವಕಪ್ ಗೆಲ್ಲಿಸಿಕೊಡಲು ಸಾಧ್ಯವಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ತಿಳಿಸಿದ್ದಾರೆ.

2027ರ ಮೆಗಾ ಟೂರ್ನಮೆಂಟ್ಗೆ ಭಾರತ ತಂಡದ ಸಿದ್ಧತೆಗಳ ಕುರಿತು ಮಾತನಾಡಿರುವ ಅವರು, "ವಿರಾಟ್ ಕೊಹ್ಲಿ ಪ್ರಸ್ತುತ ಬ್ಯಾಟಿಂಗ್ ಲೈನ್ಅಪ್ನ ಮುಖ್ಯ ಆಧಾರಸ್ತಂಭವಾಗಿದ್ದರೂ, ಕೇವಲ ಒಬ್ಬ ಆಟಗಾರನ ಮೇಲೆ ಅತಿಯಾಗಿ ಅವಲಂಬಿತವಾಗುವುದು ದೊಡ್ಡ ಟೂರ್ನಿಗಳಲ್ಲಿ ಹಿನ್ನಡೆಗೆ ಕಾರಣವಾಗಬಹುದು. ವಿದೇಶಿ ಮಣ್ಣಿನಲ್ಲಿ ಟ್ರೋಫಿ ಗೆಲ್ಲಬೇಕಾದರೆ ಬ್ಯಾಟರ್ಗಳು ಮತ್ತು ಬೌಲರ್ಗಳ ಸಾಮೂಹಿಕ ಪ್ರದರ್ಶನ ಅತ್ಯಗತ್ಯ" ಎಂದು ಹೇಳಿದರು.
"2003ರಲ್ಲಿ ಸೌತ್ ಆಫ್ರಿಕಾದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಭರ್ಜರಿ ಫಾರ್ಮ್ನಲ್ಲಿದ್ದರು ಮತ್ತು 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಆಗಿ ಆಯ್ಕೆಯಾಗಿದ್ದರು. ಇದಾಗ್ಯೂ ಆ ಟೂರ್ನಿಯಲ್ಲಿ ಸಚಿನ್ ಒಬ್ಬರೇ ರನ್ ಗಳಿಸಲಿಲ್ಲ. ಭಾರತ ಫೈನಲ್ ತಲುಪಲು ಯುವರಾಜ್ ಸಿಂಗ್, ರಾಹುಲ್ ದ್ರಾವಿಡ್, ವಿರೇಂದ್ರ ಸೆಹ್ವಾಗ್, ಆಶಿಶ್ ನೆಹ್ರಾ, ಝಹೀರ್ ಖಾನ್ ಅವರಂತಹ ಇತರ ಆಟಗಾರರ ಕೊಡುಗೆಯೂ ದೊಡ್ಡದಾಗಿತ್ತು. ಹೀಗಾಗಿ ಸೌತ್ ಆಫ್ರಿಕಾದಲ್ಲಿ ಟೂರ್ನಮೆಂಟ್ ಗೆಲ್ಲಬೇಕಿದ್ದರೆ ಎಲ್ಲರ ಪ್ರದರ್ಶನ ಕೂಡ ಅತೀ ಮುಖ್ಯವಾಗಿರುತ್ತದೆ" ಎಂದು ವಿವರಿಸಿದರು.
"ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಂತಹ ಹಿರಿಯ ಆಟಗಾರರೊಂದಿಗೆ ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ ಮತ್ತು ಇಶಾನ್ ಕಿಶನ್ ಅವರಂತಹ ಆಟಗಾರರು ನಿರಂತರವಾಗಿ ರನ್ ಗಳಿಸಬೇಕಾದ ಅಗತ್ಯವಿದೆ. ಇದರೊಂದಿಗೆ ಭಾರತ ತಂಡ ಟ್ರೋಫಿ ಎತ್ತಿಹಿಡಿಯಬೇಕಾದರೆ ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗಗಳು ಕೂಡ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಟೀಮ್ ಇಂಡಿಯಾ ಈಗಲೇ ಇದಕ್ಕಾಗಿ ಸಂಪೂರ್ಣವಾಗಿ ಸಜ್ಜಾಗಬೇಕು" ಎಂದರು.