ನಗೋಯಾ, ಅ.03 (DaijiworldNews/TA): ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ಕನ್ನಡತಿ ಪ್ರಣವಿ ಅರಸ್ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಮಹಿಳಾ ವೈಯಕ್ತಿಕ ಗಾಲ್ಫ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳಾ ಗಾಲ್ಫ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

23 ವರ್ಷದ ಮೈಸೂರಿನ ಪ್ರಣವಿ ಅರಸ್ ಅವರು ನಾಲ್ಕು ದಿನಗಳ ಮಹಿಳಾ ವೈಯಕ್ತಿಕ ಸ್ಟ್ರೋಕ್ ಪ್ಲೇ ಸ್ಪರ್ಧೆಯಲ್ಲಿ ಒಟ್ಟು 15-ಅಂಡರ್-ಪಾರ್ 265 ಸ್ಕೋರ್ ದಾಖಲಿಸಿ ಅಗ್ರಸ್ಥಾನ ಪಡೆದರು. ಅಂತಿಮ ದಿನ ಪ್ರಣವಿ ಅವರಿಗೆ ಆರಂಭದಲ್ಲೇ ದೊಡ್ಡ ಸವಾಲು ಎದುರಾಯಿತು. ಮೂರನೇ ಹೋಲ್ನಲ್ಲಿ ‘ಟ್ರಿಪಲ್ ಬೋಗಿ’ ದಾಖಲಿಸಿದ ಪರಿಣಾಮ ಅವರ ಮುನ್ನಡೆ ಕುಸಿಯಿತು. ಆದರೆ ಒತ್ತಡಕ್ಕೆ ಮಣಿಯದ ಪ್ರಣವಿ ಬಳಿಕ ಅದ್ಭುತವಾಗಿ ಕಮ್ಬ್ಯಾಕ್ ಮಾಡಿದರು. ನಿರ್ಣಾಯಕ ಹಂತದಲ್ಲಿ ಮೂರು ಬರ್ಡಿಗಳನ್ನು ಬಾರಿಸುವ ಮೂಲಕ ವಿಶ್ವದ ಆರನೇ ಶ್ರೇಯಾಂಕದ ಚೀನಾದ ಆಟಗಾರ್ತಿ ರುಯೋನಿಂಗ್ ಯಿನ್ ಅವರನ್ನು ಕೇವಲ ಒಂದು ಸ್ಟ್ರೋಕ್ ಅಂತರದಿಂದ ಹಿಂದಿಕ್ಕಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಪ್ರಣವಿ ಅವರ ವೈಯಕ್ತಿಕ ಚಿನ್ನದ ಜೊತೆಗೆ ಭಾರತ ಮಹಿಳಾ ಗಾಲ್ಫ್ ತಂಡವೂ ಬೆಳ್ಳಿ ಪದಕ ಗೆದ್ದಿದೆ. ಒಲಿಂಪಿಯನ್ ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಅವರನ್ನೊಳಗೊಂಡ ಭಾರತ ತಂಡ 14-ಅಂಡರ್ 546 ಸ್ಕೋರ್ನೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿತು.
ಮಹಿಳಾ ಗಾಲ್ಫ್ನಲ್ಲಿ ಭಾರತದ ಮೊದಲ ಚಿನ್ನ : ಏಷ್ಯನ್ ಗೇಮ್ಸ್ ಮಹಿಳಾ ಗಾಲ್ಫ್ನಲ್ಲಿ ಇದುವರೆಗೆ ಭಾರತಕ್ಕೆ ದೊರೆತ ಅತ್ಯುತ್ತಮ ವೈಯಕ್ತಿಕ ಫಲಿತಾಂಶವೆಂದರೆ 2022ರ ಹ್ಯಾಂಗ್ಝೌ ಏಷ್ಯನ್ ಗೇಮ್ಸ್ನಲ್ಲಿ ಅದಿತಿ ಅಶೋಕ್ ಗೆದ್ದ ಬೆಳ್ಳಿ ಪದಕ. ಇದೀಗ ಪ್ರಣವಿ ಅರಸ್ ಚಿನ್ನ ಗೆಲ್ಲುವ ಮೂಲಕ ಆ ದಾಖಲೆಯನ್ನು ಮೀರಿದ್ದಾರೆ. ಪುರುಷರ ವಿಭಾಗದಲ್ಲಿ 2002ರಲ್ಲಿ ಶಿವ ಕಪೂರ್ ಚಿನ್ನ ಗೆದ್ದ ಬಳಿಕ, ಏಷ್ಯನ್ ಗೇಮ್ಸ್ ಗಾಲ್ಫ್ನ ವೈಯಕ್ತಿಕ ವಿಭಾಗದಲ್ಲಿ ಭಾರತಕ್ಕೆ ದೊರೆತ ಮೊದಲ ಚಿನ್ನದ ಪದಕವೂ ಇದಾಗಿದೆ. ಮೈಸೂರಿನಲ್ಲಿ ಆರಂಭವಾದ ಪ್ರಣವಿ ಅರಸ್ ಅವರ ಗಾಲ್ಫ್ ಪಯಣ ಇದೀಗ ಏಷ್ಯನ್ ಗೇಮ್ಸ್ನ ಚಿನ್ನದ ಪದಕದವರೆಗೆ ತಲುಪಿದೆ. ನಿರ್ಣಾಯಕ ಕ್ಷಣಗಳಲ್ಲಿ ತೋರಿದ ಆತ್ಮವಿಶ್ವಾಸ ಮತ್ತು ಸ್ಥಿರ ಪ್ರದರ್ಶನದ ಮೂಲಕ ಅವರು ಭಾರತೀಯ ಗಾಲ್ಫ್ನಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.