ದೆಹಲಿ, ಅ.03 (DaijiworldNews/AA): ಟೀಮ್ ಇಂಡಿಯಾ ಇಂದು ಬೇರೆ ಬೇರೆ ಕ್ರೀಡೆ ಹಾಗೂ ಸರಣಿಗಳಿಗೆ ಸೇರಿದ ಒಟ್ಟು 4 ಮಹತ್ವದ ಪಂದ್ಯಗಳಲ್ಲಿ ಕಣಕ್ಕಿಳಿಯುತ್ತಿದ್ದು, ಭಾರತೀಯ ಕ್ರೀಡಾ ಪ್ರೇಮಿಗಳಿಗೆ ಹಬ್ಬವಾಗಿದೆ.

ಭಾರತ v/s ಪಾಕಿಸ್ತಾನ್:
ಜಪಾನ್ನ ನಿಶ್ಶಿನ್ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನ ಪುರುಷರ ಟಿ20 ಕ್ರಿಕೆಟ್ನ ಫೈನಲ್ನಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗುತ್ತಿವೆ. ಬೆಳಗ್ಗೆ 10:00 ಗಂಟೆಗೆ ಈ ಪಂದ್ಯ ಆರಂಭವಾಗಿದ್ದು, ಭಾರತ ಬ್ಯಾಟಿಂಗ್ ಆಯ್ಕೆಮಾಡಿಕೊಂಡಿದೆ. ಈಗಾಗಲೇ ಆರಂಭವಾಗಿರುವ ಈ ಪಂದ್ಯದಲ್ಲಿ ಭಾರತ ತಂಡ 13 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿದೆ. ಇನ್ನು ಗೆದ್ದ ತಂಡವು ಚಿನ್ನದ ಪದಕ ತನ್ನದಾಗಿಸಿಕೊಳ್ಳುತ್ತದೆ.
ಭಾರತ v/s ವೆಸ್ಟ್ ಇಂಡೀಸ್:
ಭಾರತ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಫೈನಲ್ ಪಂದ್ಯ ಇಂದು ನ್ಯೂ ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಮಧ್ಯಾಹ್ನ 2:00 ಗಂಟೆಗೆ ಆರಂಭವಾಗಲಿದೆ. ಈಗಾಗಲೇ ನಡೆದಿರುವ ಎರಡು ಪಂದ್ಯಗಳಲ್ಲಿ ಭಾರತ ತಂಡ ಗೆದ್ದಿರುತ್ತದೆ.
ಭಾರತ v/s ಮಲೇಷ್ಯಾ:
ಇಂದು ನಡೆಯಲಿರುವ ಏಷ್ಯನ್ ಗೇಮ್ಸ್ನ ಪುರುಷರ ಹಾಕಿ ಫೈನಲ್ ಪಂದ್ಯದಲ್ಲಿ ಭಾರತ ತಂಡ ಬಲಿಷ್ಠ ಮಲೇಷ್ಯಾ ತಂಡ ಮುಖಾಮುಖಿಯಾಗಲಿದೆ. ಮಧ್ಯಾಹ್ನ 3:30ಕ್ಕೆ ಈ ಪಂದ್ಯ ಆರಂಭವಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ನೇರ ಅರ್ಹತೆ ಸಿಗಲಿದೆ. ಹೀಗಾಗಿ ಈ ಪಂದ್ಯವು ಭಾರತಕ್ಕೆ ಅತ್ಯಂತ ನಿರ್ಣಾಯಕವಾಗಿದೆ.
ಭಾರತ v/s ಬ್ರೆಝಿಲ್:
ಭಾರತ ಮತ್ತು ಬ್ರೆಝಿಲ್ ನಡುವಿನ ಐತಿಹಾಸಿಕ ಅಂತಾರಾಷ್ಟ್ರೀಯ ಸೌಹಾರ್ದ ಫುಟ್ಬಾಲ್ ಪಂದ್ಯವು ಇಂದು ಕೋಲ್ಕತ್ತಾದ ಪ್ರಸಿದ್ಧ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯವು ಸಂಜೆ 7:30ಕ್ಕೆ ಆರಂಭವಾಗಲಿದೆ.