ನಗೋಯಾ, ಅ.02 (DaijiworldNews/AA): ಏಷ್ಯನ್ ಗೇಮ್ಸ್ 2026ರ ಪುರುಷರ 80 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ, ಮಹಿಳೆಯರ 65 ಕೆಜಿ ವಿಭಾಗದ ಬಾಕ್ಸಿಂಗ್ ಫೈನಲ್ನಲ್ಲಿ ಹಾಗೂ ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಭಾರತ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.

ಐಚಿ ನಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ 65 ಕೆಜಿ ವಿಭಾಗದ ಬಾಕ್ಸಿಂಗ್ ಫೈನಲ್ನಲ್ಲಿ ಖ್ಯಾತ ಮಹಿಳಾ ಬಾಕ್ಸರ್ ಪರ್ವೀನ್ ಹೂಡಾ ಅವರು ಚೈನೀಸ್ ತೈಪೆಯ ಮಾಜಿ ವಿಶ್ವ ಚಾಂಪಿಯನ್ ಚೆನ್ ನಿಯೆನ್-ಚಿನ್ ಅವರನ್ನು 3-2 ರ ಸ್ಪ್ಲಿಟ್ ನಿರ್ಧಾರದಿಂದ ಸೋಲಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಬಾಕ್ಸಿಂಗ್ನಲ್ಲಿ ಭಾರತಕ್ಕೆ ಚಿನ್ನ ತಂದುಕೊಟ್ಟ 3ನೇ ಭಾರತೀಯ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಪುರುಷರ 80 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಭಾರತದ ಅಂಕುಶ್ ಪಂಗಲ್ ಚಿನ್ನದ ಪದಕ ಗೆದ್ದಿದ್ದಾರೆ. ಸೆಮಿಫೈನಲ್ನಲ್ಲಿ ಅದ್ಭುತ ಕಮ್ಬ್ಯಾಕ್ ಮಾಡಿದ ಅಂಕುಶ್, ಉಜ್ಬೇಕಿಸ್ತಾನದ ಹಾಲಿ 75 ಕೆಜಿ ವಿಶ್ವ ಚಾಂಪಿಯನ್ ಫಜ್ಲಿದ್ದೀನ್ ಎರ್ಕಿನ್ಬೋವ್ ಅವರನ್ನು 4-1 ಅಂತರದಿಂದ ಮಣಿಸಿ ಫೈನಲ್ ತಲುಪಿದ್ದರು. ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಕಿಮ್ ಮಿನ್-ಸಿಯಾಂಗ್ ಅವರನ್ನು ಸೋಲಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡರು.
ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಉದಯೋನ್ಮುಖ ಕುಸ್ತಿಪಟು ಸುಜೀತ್ ಕಲ್ಕಲ್ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಸುಜೀತ್ ಫೈನಲ್ನಲ್ಲಿ ತಜಕಿಸ್ತಾನದ ಅಬ್ದುಲ್ಮಜೀದ್ ಕುಡೀವ್ ವಿರುದ್ಧ ಆರಂಭದಲ್ಲಿ 2-9 ಅಂತರದಿಂದ ಹಿನ್ನಡೆ ಅನುಭವಿಸಿದ್ದರು. ನಂತರ ಸತತ 8 ಅಂಕಗಳನ್ನು ಗಳಿಸುವ ಮೂಲಕ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಇದು ಈ ಬಾರಿಯ ಏಷ್ಯನ್ ಗೇಮ್ಸ್ನ ಕುಸ್ತಿ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನದ ಪದಕವಾಗಿದೆ.
ಇಂದು ಒಂದೇ ದಿನ ಭಾರತ 5 ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಈ ಮೂಲಕ ಗುರುವಾರ ೮ನೇ ಸ್ಥಾನದಲ್ಲಿದ್ದ ಭಾರತ ಪದಕ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಈ ಮೂಲಕ ಭಾರತದ ಒಟ್ಟು ಪದಕಗಳ ಸಂಖ್ಯೆ 75ಕ್ಕೆ ಏರಿಕೆಯಾಗಿದೆ. ಇದರಲ್ಲಿ 15 ಚಿನ್ನ, 25 ಬೆಳ್ಳಿ, 35 ಕಂಚಿನ ಪದಕಗಳು ಸೇರಿವೆ.