ನಗೋಯಾ, ಸೆ.30 (DaijiworldNews/AA): ಏಷ್ಯನ್ ಗೇಮ್ಸ್ನಲ್ಲಿ ಕಾಂಪೌಂಡ್ ಮಿಶ್ರ ತಂಡ ವಿಭಾಗದ ಫೈನಲ್ನಲ್ಲಿ ಹಾಗೂ ಪುರುಷರ ಕಾಂಪೌಂಡ್ ಆರ್ಚರಿ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಚಿನ್ನದ ಪದಕ ಪಡೆದುಕೊಂಡಿದೆ. ಈ ಮೂಲಕ ಆರ್ಚರಿಯಲ್ಲಿ ಭಾರತ ಹ್ಯಾಟ್ರಿಕ್ ಚಿನ್ನ ತನ್ನದಾಗಿಸಿಕೊಂಡಿದೆ.

ಏಷ್ಯನ್ ಗೇಮ್ಸ್ನಲ್ಲಿ ಕಾಂಪೌಂಡ್ ಮಿಶ್ರ ತಂಡ ವಿಭಾಗದ ಫೈನಲ್ನಲ್ಲಿ ದಕ್ಷಿಣ ಕೊರಿಯಾವನ್ನು 'ಶೂಟ್-ಆಫ್'ನಲ್ಲಿ 158-157 ಅಂತರದಿಂದ ಹಾಗೂ ಪುರುಷರ ಕಾಂಪೌಂಡ್ ಆರ್ಚರಿ ಫೈನಲ್ ಪಂದ್ಯದಲ್ಲಿ ಚೀನಾವನ್ನು 238-237 ಅಂತರದಿಂದ ಸೋಲಿಸಿ ಭಾರತ ತಂಡವು ಚಿನ್ನದ ಪದಕ ತನ್ನದಾಗಿಸಿಕೊಂಡಿದೆ.
ಸಾಹಿಲ್ ರಾಜೇಶ್ ಜಾಧವ್ ಮತ್ತು ಚಿಖಿತಾ ತನಿಪಾರ್ಥಿ ಅವರನ್ನೊಳಗೊಂಡ ಭಾರತದ ಮಿಶ್ರ ಕಾಂಪೌಂಡ್ ಬಿಲ್ಲುಗಾರಿಕೆ ಜೋಡಿಯು ದಕ್ಷಿಣ ಕೊರಿಯಾದ ಪಾರ್ಕ್ ಮತ್ತು ಚೋಯ್ ಅವರನ್ನು 158-157 ಅಂತರದಿಂದ ಸೋಲಿಸಿದೆ. ಇನ್ನು ಸಾಹಿಲ್ ಜಾದವ್, ಕುಶಾಲ್ ದಲಾಲ್ ಮತ್ತು ತಿರುಮೂರು ಗಣೇಶ್ ಮಣಿ ರತ್ನಂ ಅವರಿದ್ದ ತಂಡವು ಪುರುಷರ ಕಂಪೌಂಡ್ ಆರ್ಚರಿ ವಿಭಾಗದಲ್ಲಿ ಚೀನಾವನ್ನು 238-237 ಅಂತರದಿಂದ ಸೋಲಿಸಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.
ಇದಕ್ಕೂ ಮುನ್ನ ಮಹಿಳೆಯರ ಕಂಪೌಂಡ್ ಆರ್ಚರಿ ವಿಭಾಗದಲ್ಲಿ ಪ್ರೀಥಿಕಾ ಪ್ರದೀಪ್, ಜ್ಯೋತಿ ಸುರೇಖಾ ವೆನ್ನಮ್ ಮತ್ತು ಚಿಕಿತಾ ತನಿಪರ್ಥಿ ಅವರಿದ್ದ ಭಾರತ ತಂಡವು ಚಿನ್ನದ ಪದಕವನ್ನು ಗೆದ್ದಿತ್ತು. ಇದೀಗ ಕಾಂಪೌಂಡ್ ಆರ್ಚರಿ ಮಿಶ್ರ ವಿಭಾಗ ಹಾಗೂ ಪುರುಷರ ಕಂಪೌಂಡ್ ಆರ್ಚರಿ ವಿಭಾಗದಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ ಇದು 10ನೇ ಚಿನ್ನದ ಪದಕವಾಗಿದೆ.