ನಗೋಯಾ, ಸೆ.30 (DaijiworldNews/AA): ಮಹಿಳೆಯರ ಕಾಂಪೌಂಡ್ ಆರ್ಚರಿ ಫೈನಲ್ ಪಂದ್ಯದಲ್ಲಿ ಚೀನಾ ತಂಡವನ್ನು 238-234 ಅಂಕಗಳ ಅಂತರದಿಂದ ಸೋಲಿಸಿ ಭಾರತೀಯ ವನಿತೆಯರು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ ಕಾಂಪೌಂಡ್ ಆರ್ಚರಿ ತಂಡ ಚಿನ್ನದ ಪದಕ ಗೆದ್ದಿದೆ. ಈ ಮೂಲಕ ಭಾರತ ಒಟ್ಟು 7 ಚಿನ್ನದ ಪದಕಗಳನ್ನು ಪಡೆದುಕೊಂಡಿದೆ.
ಪ್ರೀಥಿಕಾ ಪ್ರದೀಪ್, ಜ್ಯೋತಿ ಸುರೇಖಾ ವೆನ್ನಮ್ ಮತ್ತು ಚಿಕಿತಾ ತನಿಪರ್ಥಿ ಅವರಿದ್ದ ತಂಡವು ಫೈನಲ್ನ ನಾಲ್ಕು ಸುತ್ತುಗಳಲ್ಲಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿತು. ಭಾರತ ತಂಡ ಆರಂಭಿಕ ಸುತ್ತಿನಲ್ಲಿ 60-58 ಅಂತರದ ಮುನ್ನಡೆ ಸಾಧಿಸಿತು. ಕೊನೆಯವರೆಗೂ ಮುನ್ನಡೆ ಕಾಯ್ದುಕೊಂಡಿತು.
ಕೊನೆಯ ಸುತ್ತಿನಲ್ಲಿ 10 ಅಂಕಗಳನ್ನು ಗಳಿಸುವ ಮೂಲಕ ಭಾರತ ತಂಡ ಚೀನಾವನ್ನು 238-234 ಅಂತರದಿಂದ ಸೋಲಿಸಿ, ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಈ ಮೂಲಕ ಭಾರತದ ಮಹಿಳಾ ತಂಡ ಏಷ್ಯನ್ ಗೇಮ್ಸ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ.
ಈ ಬಾರಿಯ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಇದು ಏಳನೇ ಚಿನ್ನದ ಪದಕವಾಗಿದೆ. ಒಟ್ಟು ಪದಕಗಳ ಸಂಖ್ಯೆ ಈಗ 54ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 21 ಬೆಳ್ಳಿ, 26 ಕಂಚಿನ ಪದಕಗಳು ಸೇರಿವೆ.