ನಗೋಯಾ, ಸೆ.27 (DaijiworldNews/TA): 2026ರ ಏಷ್ಯನ್ ಗೇಮ್ಸ್ನಲ್ಲಿ ಜಪಾನ್ನ 11 ವರ್ಷದ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಯುಕಿ ಕುರಿಹರಾ ಇ-ಸ್ಪೋರ್ಟ್ಸ್ನಲ್ಲಿ ಚಿನ್ನದ ಪದಕ ಗೆದ್ದು ಗಮನ ಸೆಳೆದಿದ್ದಾರೆ. ‘ಪುಯೋ ಪುಯೋ ಚಾಂಪಿಯನ್ಸ್’ ಪಝಲ್ ಗೇಮ್ನ ಪುರುಷರ ವೈಯಕ್ತಿಕ ವಿಭಾಗದಲ್ಲಿ ಚಾಂಪಿಯನ್ ಆಗಿರುವ ಯುಕಿ, ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಅತ್ಯಂತ ಕಿರಿಯ ಚಿನ್ನದ ಪದಕ ವಿಜೇತ ಎಂಬ ದಾಖಲೆ ನಿರ್ಮಿಸಿದ್ದಾರೆ. ಫೈನಲ್ನಲ್ಲಿ ದಕ್ಷಿಣ ಕೊರಿಯಾದ 24 ವರ್ಷದ ಅನುಭವಿ ಆಟಗಾರ ಕಾಂಗ್ ಡಾಂಗ್-ಶಿನ್ ಅವರನ್ನು ಎದುರಿಸಿದ ಯುಕಿ, 10-2 ಅಂತರದಲ್ಲಿ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಟೂರ್ನಿಯುದ್ದಕ್ಕೂ ಯುಕಿ ಅತ್ಯಂತ ವೇಗ ಹಾಗೂ ನಿಖರತೆಯಿಂದ ಆಟವಾಡಿದರು. ಕ್ವಾರ್ಟರ್ಫೈನಲ್ನಲ್ಲಿ ಸಿಂಗಾಪುರದ ಆಟಗಾರನನ್ನು 5-0 ಅಂತರದಲ್ಲಿ ಮಣಿಸಿದ ಅವರು, ಸೆಮಿಫೈನಲ್ನಲ್ಲಿ ಥಾಯ್ಲೆಂಡ್ನ 28 ವರ್ಷದ ಆಟಗಾರನ ವಿರುದ್ಧ 10-1 ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದ್ದರು. ಪಂದ್ಯದ ವೇಳೆ ಬಣ್ಣದ ಬ್ಲಾಕ್ಗಳನ್ನು ವೇಗವಾಗಿ ಜೋಡಿಸಿ ಬೃಹತ್ ‘ಚೈನ್ ರಿಯಾಕ್ಷನ್’ಗಳನ್ನು ಸೃಷ್ಟಿಸುವ ಮೂಲಕ ಎದುರಾಳಿಗಳಿಗೆ ಒತ್ತಡ ಹೇರುತ್ತಿದ್ದರು.
ಯುಕಿ ತಮ್ಮ ಆರನೇ ವಯಸ್ಸಿನಲ್ಲಿ ಕ್ರಿಸ್ಮಸ್ ಉಡುಗೊರೆಯಾಗಿ ಪಡೆದ ‘ಪುಯೋ ಪುಯೋ ಟೆಟ್ರಿಸ್ 2’ ಗೇಮ್ ಮೂಲಕ ಈ ಆಟದತ್ತ ಆಕರ್ಷಿತರಾದರು. ಅವರ ಪ್ರತಿಭೆಯನ್ನು ಗುರುತಿಸಿದ ಬಳಿಕ, 2026ರ ಏಪ್ರಿಲ್ನಲ್ಲಿ ಅಧಿಕೃತ ವೃತ್ತಿಪರ ಗೇಮರ್ ಪರವಾನಗಿ ಪಡೆದಿದ್ದರು. ಅದಾದ ಕೆಲವೇ ತಿಂಗಳಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
‘ಪುಯೋ ಪುಯೋ’ ಒಂದು ಆಕ್ಷನ್-ಪಝಲ್ ವಿಡಿಯೋ ಗೇಮ್. ಪರದೆಯ ಮೇಲಿನಿಂದ ಬೀಳುವ ವಿವಿಧ ಬಣ್ಣಗಳ ಜೆಲ್ಲಿ ಮಾದರಿಯ ‘ಪುಯೋ’ಗಳನ್ನು ಒಂದೇ ಬಣ್ಣದ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ತುಣುಕುಗಳು ಪರಸ್ಪರ ಸ್ಪರ್ಶಿಸುವಂತೆ ಜೋಡಿಸಬೇಕು. ಅವು ಸ್ಫೋಟಗೊಂಡಾಗ ಮೇಲಿರುವ ಬ್ಲಾಕ್ಗಳು ಕೆಳಗೆ ಬಿದ್ದು ಮತ್ತಷ್ಟು ಸರಣಿ ಸ್ಫೋಟಗಳನ್ನು ಉಂಟುಮಾಡುತ್ತವೆ. ಇದನ್ನೇ ‘ಚೈನ್ ರಿಯಾಕ್ಷನ್’ ಎಂದು ಕರೆಯಲಾಗುತ್ತದೆ. ಎದುರಾಳಿಗಿಂತ ವೇಗವಾಗಿ ಹಾಗೂ ಹೆಚ್ಚು ಪರಿಣಾಮಕಾರಿಯಾಗಿ ಚೈನ್ ರಿಯಾಕ್ಷನ್ ಸೃಷ್ಟಿಸಿ, ಅವರ ಪರದೆಯ ಮೇಲೆ ಹೆಚ್ಚುವರಿ ಬ್ಲಾಕ್ಗಳನ್ನು ತುಂಬಿಸುವುದು ಆಟದ ಪ್ರಮುಖ ತಂತ್ರವಾಗಿದೆ. ಎದುರಾಳಿಯ ಪರದೆ ಸಂಪೂರ್ಣವಾಗಿ ತುಂಬಿದಾಗ ಪಂದ್ಯದಲ್ಲಿ ಗೆಲುವು ಸಾಧಿಸಲಾಗುತ್ತದೆ.