ಮುಂಬೈ, ಸೆ.25 (DaijiworldNews/TA): ಭಾರತ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ವಿನೋದ್ ಕಾಂಬ್ಳಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ವೃದ್ಧಾಶ್ರಮವೊಂದರಿಂದ ಅವರು ಮಾತನಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕಾಂಬ್ಳಿಯವರ ಆರೋಗ್ಯ ಹಾಗೂ ಪ್ರಸ್ತುತ ಪರಿಸ್ಥಿತಿ ಕುರಿತು ಅಭಿಮಾನಿಗಳಲ್ಲಿ ಕಳವಳ ಮೂಡಿಸಿದೆ. 90ರ ದಶಕದಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ನಿಂದ ಕ್ರಿಕೆಟ್ ಅಭಿಮಾನಿಗಳ ಮನಗೆದ್ದಿದ್ದ ಕಾಂಬ್ಳಿ, ಇದೀಗ ವೃದ್ಧಾಶ್ರಮವೊಂದರಲ್ಲಿ ಕಾಣಿಸಿಕೊಂಡಿರುವುದು ಹಲವರ ಗಮನ ಸೆಳೆದಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ವಿನೋದ್ ಕಾಂಬ್ಳಿ ವೃದ್ಧಾಶ್ರಮದ ಕುರಿತು ಮಾತನಾಡಿದ್ದಾರೆ. ತಾವು ಪ್ರಸ್ತುತ ‘ನಿಡಾನ್’ನಲ್ಲಿದ್ದು, ಅಲ್ಲಿನ ಸೌಲಭ್ಯಗಳು ಉತ್ತಮವಾಗಿವೆ ಎಂದು ಅವರು ಹೇಳಿದ್ದಾರೆ. ಅಲ್ಲಿನ ಸ್ವಚ್ಛತೆ ಸೇರಿದಂತೆ ಇತರ ವ್ಯವಸ್ಥೆಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಕಾಂಬ್ಳಿ, ಅಲ್ಲಿರುವಾಗ ತಾವು ಮನೆಯಲ್ಲಿಲ್ಲ ಎಂಬ ಭಾವನೆ ಮೂಡುವುದಿಲ್ಲ ಮತ್ತು ಅಲ್ಲಿನ ಜನರಿಂದ ಪ್ರೀತಿ ಹಾಗೂ ಗೌರವ ದೊರೆಯುತ್ತಿದೆ ಎಂದು ಹೇಳಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಕಾಂಬ್ಳಿಯವರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಹಲವರು ಅವರ ಆರೋಗ್ಯ ಉತ್ತಮವಾಗಿರಲಿ ಎಂದು ಹಾರೈಸಿದ್ದಾರೆ.
ವಿನೋದ್ ಕಾಂಬ್ಳಿ ಕಳೆದ ಕೆಲವು ವರ್ಷಗಳಿಂದ ಆರೋಗ್ಯ ಸಮಸ್ಯೆಗಳು ಹಾಗೂ ವೈಯಕ್ತಿಕ ಏರಿಳಿತಗಳ ಕಾರಣದಿಂದ ಸುದ್ದಿಯಲ್ಲಿದ್ದರು. ಈ ಹಿಂದೆ ಅವರಿಗೆ ಸರಿಯಾಗಿ ನಡೆಯಲು ಸಾಧ್ಯವಾಗದೆ, ಇತರರ ನೆರವಿನೊಂದಿಗೆ ಸಾಗುತ್ತಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಆ ಬಳಿಕ ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವರು ಅವರಿಗೆ ನೆರವು ನೀಡಿದ್ದರು. ಇದೀಗ ಮತ್ತೊಮ್ಮೆ ಕಾಂಬ್ಳಿಯವರ ವಿಡಿಯೋ ವೈರಲ್ ಆಗಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ವಿನೋದ್ ಕಾಂಬ್ಳಿ 1991ರ ಅಕ್ಟೋಬರ್ನಲ್ಲಿ ಭಾರತದ ಪರ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ತಮ್ಮ 21ನೇ ಜನ್ಮದಿನದಂದೇ ಮೊದಲ ಏಕದಿನ ಶತಕ ಬಾರಿಸಿದ್ದರು. ಕಾಂಬ್ಳಿ ಭಾರತದ ಪರ 17 ಟೆಸ್ಟ್ ಪಂದ್ಯಗಳಲ್ಲಿ 1,084 ರನ್ ಗಳಿಸಿದ್ದು, ಅವರ ಬ್ಯಾಟಿಂಗ್ ಸರಾಸರಿ 54ರಷ್ಟಿತ್ತು. ಇನ್ನು 104 ಏಕದಿನ ಪಂದ್ಯಗಳಲ್ಲಿ 2,477 ರನ್ ಗಳಿಸಿದ್ದಾರೆ. ಅವರ ಟೆಸ್ಟ್ ವೃತ್ತಿಜೀವನ 24ನೇ ವಯಸ್ಸಿನಲ್ಲೇ ಅಂತ್ಯಗೊಂಡಿತ್ತು. 2000ರಲ್ಲಿ ಅವರ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವೂ ಮುಕ್ತಾಯಗೊಂಡಿತು. 90ರ ದಶಕದಲ್ಲಿ ಭಾರತೀಯ ಕ್ರಿಕೆಟ್ನಲ್ಲಿ ಗಮನಾರ್ಹ ಹೆಸರು ಮಾಡಿದ್ದ ವಿನೋದ್ ಕಾಂಬ್ಳಿ ಅವರ ಇತ್ತೀಚಿನ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.