ಮುಂಬೈ, ಆ. 31 (DaijiworldNews/AK): ಟೆನಿಸ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ನೊವಾಕ್ ಜೊಕೊವಿಚ್, ನ್ಯೂಯಾರ್ಕ್ನ ಆರ್ಥರ್ ಆ್ಯಶ್ ಸ್ಟೇಡಿಯಂನಲ್ಲಿ ನಡೆದ ಯುಎಸ್ ಓಪನ್ 2026ರ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ.

ಅರ್ಜೆಂಟೀನಾದ ಅನ್ಸೀಡೆಡ್ ಆಟಗಾರ ಮಾರಿಯಾನೊ ನವೋನ್ ವಿರುದ್ಧ ಕಣಕ್ಕಿಳಿದ ಜೊಕೊವಿಚ್, ಮೊದಲ ಸುತ್ತಿನ ಪಂದ್ಯದಲ್ಲೇ ಪರಾಭವಗೊಂಡು ಟೂರ್ನಿಯಿಂದ ನಿರ್ಗಮಿಸಿದ್ದಾರೆ.
4 ಗಂಟೆ 36 ನಿಮಿಷಗಳ ಕಾಲ ನಡೆದ ಐದು ಸೆಟ್ಗಳ ಮಹಾ ಮ್ಯಾರಥಾನ್ ಹೋರಾಟದಲ್ಲಿ 7-6 (7-5), 5-7, 4-6, 6-2, 6-1 ಸೆಟ್ಗಳಿಂದ ಜೊಕೊವಿಚ್ ಅವರನ್ನು ಸೋಲಿಸುವಲ್ಲಿ ವಿಶ್ವದ 49ನೇ ಶ್ರೇಯಾಂಕದ ಮಾರಿಯಾನೊ ನವೋನ್ ಯಶಸ್ವಿಯಾಗಿದ್ದಾರೆ.
ನೊವಾಕ್ ಜೊಕೊವಿಚ್ ತಮ್ಮ 20 ವರ್ಷಗಳ ಯುಎಸ್ ಓಪನ್ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಪ್ರಥಮ ಸುತ್ತಿನಲ್ಲಿ ಪರಾಭವಗೊಂಡಿದ್ದಾರೆ . ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ಮೊದಲ ಸುತ್ತಿನಲ್ಲಿ ಜೊಕೊವಿಚ್ ಹೊಂದಿದ್ದ ಸತತ 77 ಪಂದ್ಯಗಳ ಗೆಲುವಿನ ನಾಗಾಲೋಟ ಕೂಡ ಇದರೊಂದಿಗೆ ಅಂತ್ಯವಾಗಿದೆ.
2006ರ ಆಸ್ಟ್ರೇಲಿಯನ್ ಓಪನ್ ಬಳಿಕ ಗ್ರ್ಯಾಂಡ್ ಸ್ಲಾಮ್ ಟೂರ್ನಿಯೊಂದರಲ್ಲಿ ಜೊಕೊವಿಚ್ ಅನುಭವಿಸಿದ ಅತ್ಯಂತ ಆಘಾತಕಾರಿ ಸೋಲು ಇದಾದಗಿದೆ.
ಈ ಪಂದ್ಯದ ನಂತರ ಮಾತನಾಡಿದ ಮಾರಿಯಾನೊ ನವೋನ್, “ಟೆನಿಸ್ ಜಗತ್ತಿನ GOAT (ಸಾರ್ವಕಾಲಿಕ ಶ್ರೇಷ್ಠ) ವಿರುದ್ಧ ಆರ್ಥರ್ ಆ್ಯಶ್ ಸ್ಟೇಡಿಯಂನ ದೊಡ್ಡ ವೇದಿಕೆಯಲ್ಲಿ 5 ಸೆಟ್ಗಳ ಪಂದ್ಯ ಗೆದ್ದಿರುವುದು ನನ್ನ ಪಾಲಿಗೆ ಕನಸು ನನಸಾದಂತೆ” ಎಂದು ಭಾವುಕರಾಗಿ ನುಡಿದಿದ್ದಾರೆ.