ಇಸ್ಲಾಮಾಬಾದ್, ಆ. 29 (DaijiworldNews/AA): ಪಾಕಿಸ್ತಾನ್ ಸರ್ಕಾರವು ನನ್ನ ತಂದೆಯನ್ನು ನೇರವಾಗಿ ಜೈಲಿನಲ್ಲಿಯೇ ಕೊಲ್ಲಲು ತಂತ್ರ ರೂಪಿಸುತ್ತಿದೆ ಎಂದು ಇಮ್ರಾನ್ ಖಾನ್ ಅವರ ಪುತ್ರರಾದ ಸುಲೈಮಾನ್ ಖಾನ್ ಮತ್ತು ಖಾಸಿಮ್ ಖಾನ್ ಅವರು ತಿಳಿಸಿದ್ದಾರೆ.

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಇಮ್ರಾನ್ ಖಾನ್ ಅವರನ್ನು ದಿನಕ್ಕೆ 23 ಗಂಟೆಗಳ ಕಾಲ ಅತ್ಯಂತ ಚಿಕ್ಕದಾದ ಕತ್ತಲೆಯ ಕೋಣೆಯಲ್ಲಿ ಇಡಲಾಗುತ್ತಿದೆ. ಅಲ್ಲದೆ ಅವರನ್ನು ಜೈಲಿನಲ್ಲಿ ಏಕಾಂಗಿಯಾಗಿ ಇಡಲಾಗಿದೆ. ಇದರಿಂದಾಗಿ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅವರ ಧ್ವನಿಯನ್ನು ಸಂಪೂರ್ಣವಾಗಿ ಅಡಗಿಸುವುದು ಮತ್ತು ಸಾಧ್ಯವಾದಷ್ಟು ಕಾಲ ಜೈಲಿನಲ್ಲಿಡುವುದೇ ಈ ಸರ್ಕಾರದ ಏಕೈಕ ಉದ್ದೇಶವಾಗಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"ಸೂಕ್ತ ಗಾಳಿ, ಬೆಳಕು ಮತ್ತು ಸೌಕರ್ಯಗಳಿಲ್ಲದ ಕಾರಣ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಗಂಭೀರವಾಗಿ ಹದಗೆಡುತ್ತಿದೆ. ತಕ್ಷಣವೇ ಅವರಿಗೆ ಅವರ ವೈಯಕ್ತಿಕ ವೈದ್ಯರಿಂದ ತುರ್ತು ತಪಾಸಣೆ ನಡೆಸಲು ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಲು ಅನುಮತಿ ನೀಡಬೇಕು" ಎಂದು ಮನವಿ ಮಾಡಿದ್ದಾರೆ.