ನವದೆಹಲಿ, ಆ. 29 (DaijiworldNews/AK): ಭಾರತ ತಂಡವನ್ನು ಟಿ20 ವಿಶ್ವಕಪ್ ಗೆಲ್ಲಿಸಿದ ಬಳಿಕವೇ ರಾಷ್ಟ್ರೀಯ ತಂಡದಿಂದ ಕೈಬಿಡಲಾಗಿದ್ದ ವಿಚಾರದ ಕುರಿತು ಟೀಂ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿದ್ದಾರೆ.

ಟಿ20 ವಿಶ್ವಕಪ್ ಗೆಲುವಿನ ಬಳಿಕ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವಾಗ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಹೊರಗಿಟ್ಟು, ಮುಂದಿನ ನಾಯಕನಾಗಿ ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡಿತ್ತು.
ಕಳೆದ 2 ವರ್ಷಗಳಿಂದ ಸೂರ್ಯಕುಮಾರ್ ಅವರ ಬ್ಯಾಟಿಂಗ್ ಫಾರ್ಮ್ ನಿರೀಕ್ಷಿತ ಮಟ್ಟದಲ್ಲಿ ಇರದಿರುವುದೇ ಅವರನ್ನು ತಂಡದಿಂದ ಕೈಬಿಡಲು ಪ್ರಮುಖ ಕಾರಣ ಎನ್ನಲಾಗಿತ್ತು.
2025ರಲ್ಲಿ ಭಾರತ ಪರ ಆಡಿದ ಯಾವುದೇ ಪಂದ್ಯದಲ್ಲೂ ಸೂರ್ಯಕುಮಾರ್ ಅರ್ಧಶತಕ ದಾಖಲಿಸಿರಲಿಲ್ಲ. ತವರಿನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲೂ ಅಮೆರಿಕ ತಂಡದ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ಗಳಿಸಿದ ಪ್ರಮುಖ ಇನ್ನಿಂಗ್ಸ್ ಹೊರತುಪಡಿಸಿ ಅವರ ಬ್ಯಾಟಿಂಗ್ ಗಮನಾರ್ಹವಾಗಿರಲಿಲ್ಲ. ಆದರೆ, ನಾಯಕನಾಗಿ ಸೂರ್ಯಕುಮಾರ್ ಯಾವುದೇ ತಪ್ಪು ಮಾಡಿರಲಿಲ್ಲ. ಅವರ ನಾಯಕತ್ವದಲ್ಲಿ ಭಾರತ ತಂಡ ಒಂದೇ ಒಂದು ಸರಣಿಯನ್ನೂ ಸೋಲದೇ, ಏಷ್ಯಾಕಪ್ ಜೊತೆಗೆ ತವರಿನಲ್ಲೇ ಟಿ20 ವಿಶ್ವಕಪ್ನ್ನೂ ಗೆದ್ದಿತ್ತು.
ಈ ಬಗ್ಗೆ ಆಕಾಶ್ ಚೋಪ್ರಾ ಅವರೊಂದಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿರುವ ಸೂರ್ಯ ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ತಂಡದಿಂದ ಕೈಬಿಟ್ಟ ವಿಚಾರ ತಿಳಿದಾಗ ಆರಂಭದಲ್ಲಿ ತಾನು ಹೆಚ್ಚು ಪ್ರತಿಕ್ರಿಯಿಸಿರಲಿಲ್ಲ. ಆಯ್ಕೆಗಾರರ ಸ್ಥಾನದಲ್ಲಿ ನಿಂತು ಅವರ ನಿರ್ಧಾರ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ ಎಂದು ತಿಳಿಸಿದ್ದಾರೆ.
ತಂಡದಲ್ಲಿ ನನ್ನ ಹೆಸರು ಇಲ್ಲ ಎಂಬುದು ತಿಳಿದಾಗ ನಾನು ನಗುತ್ತಿದ್ದೆ. ಕಳೆದ ಒಂದು ಅಥವಾ ಎರಡು ವರ್ಷಗಳಿಂದ ತಂಡದೊಂದಿಗೆ ಆಡುತ್ತಿದ್ದಾಗ, ಒತ್ತಡದ ಸಂದರ್ಭಗಳು ಎದುರಾದಾಗ ಅಥವಾ ವಿಷಯಗಳು ನನ್ನ ಪರವಾಗಿ ನಡೆಯದಿದ್ದಾಗಲೂ ನಾನು ನಗುತ್ತಿದ್ದೆ, ಮನಸ್ಸನ್ನು ಶಾಂತವಾಗಿಟ್ಟುಕೊಳ್ಳುತ್ತಿದ್ದೆ. ಹಿಂದೆ ನನಗೆ ಉತ್ತಮ ಪ್ರದರ್ಶನ ನೀಡುವ ಅವಕಾಶಗಳು ಸಿಕ್ಕಾಗ ಆ ಕ್ಷಣಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ ಎಂದಿದ್ದಾರೆ.