ಕೊಲಂಬೊ, ,ಆ. 24 (DaijiworldNews/AK): ಕೊಲಂಬೊ ದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೈದಾನದಲ್ಲಿ ಪರಸ್ಪರ ಜಗಳ ಮಾಡಿಕೊಂಡಿದ್ದ ಶ್ರೀಲಂಕಾ ವೇಗಿ ಅಸಿತಾ ಫೆರ್ನಾಂಡೋ ಹಾಗೂ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ವಿರುದ್ಧ ಐಸಿಸಿ ಗಂಭೀರ ಕ್ರಮ ಜರುಗಿಸಿದೆ.

ಆದರೆ ಆ ಸಂದರ್ಭದಲ್ಲಿ ಏನು ನಡೆಯಿತು ಎಂಬುದನ್ನು ತಿಳಿದುಕೊಳ್ಳುವ ಮೊದಲೇ ಮಾಜಿ ಆಟಗಾರರು ಯಶಸ್ವಿ ಜೈಸ್ವಾಲ್ ಮಾಡಿದ್ದು ತಪ್ಪು ಎಂಬ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ತಾಳ್ಮೆ ಕಳೆದುಕೊಂಡಿರುವ ಯಶಸ್ವಿ ಜೈಸ್ವಾಲ್ ಖಾರವಾಗಿಯೇ ಉತ್ತರ ನೀಡಿದ್ದಾರೆ.
ಕೊಲಂಬೊ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ 45 ರನ್ಗಳ ಇನ್ನಿಂಗ್ಸ್ ಆಡಿ ತಮ್ಮ ವಿಕೆಟ್ ಒಪ್ಪಿಸಿದರು. ಇತ್ತ ಜೈಸ್ವಾಲ್ ವಿಕೆಟ್ ಪಡೆದ ಸಂತಸದಲ್ಲಿ ಎದುರಾಳಿ ತಂಡದ ವೇಗಿ ಅಸಿತಾ ಫೆರ್ನಾಂಡೋ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದಲ್ಲದೆ ಜೈಸ್ವಾಲ್ ಪೆವಿಲಿಯನತ್ತ ಹೆಜ್ಜೆ ಹಾಕುತ್ತಿರುವಾಗ ಅವರನ್ನು ಕೆಣಕ್ಕುವ ಕೆಲಸಕ್ಕೆ ಕೈಹಾಕಿದರು.
ಇದರಿಂದ ಕೆರಳಿದ ಜೈಸ್ವಾಲ್, ಫೆರ್ನಾಂಡೋ ಬಳಿಗೆ ಬಂದು ವಾಗ್ವಾದದಲ್ಲಿ ತೊಡಗಿದರು. ಇದೇ ಸಂದರ್ಭದಲ್ಲಿ ತಮ್ಮ ಹೆಲ್ಮೆಟ್ನಿಂದ ಫೆರ್ನಾಂಡೋ ತಲೆಗೆ ಲಗುವಾಗಿ ಗುದ್ದಿದರು. ಜೈಸ್ವಾಲ್ ಅವರ ಈ ನಡೆಯೇ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಎದುರಾಳಿ ತಂಡದವರು ಜೈಸ್ವಾಲ್ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಐಸಿಸಿಗೆ ಬಿಟ್ಟಿದ್ದು ಎಂದು ಹೇಳಿಕೆ ನೀಡಿದರೆ, ಇತ್ತ ಟೀಂ ಇಂಡಿಯಾದ ಮಾಜಿ ಆಟಗಾರರು ಜೈಸ್ವಾಲ್ ಮಾಡಿದ್ದು ತಪ್ಪು ಎಂಬರ್ಥದಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಂತಹವರಲ್ಲಿ ಮಾಜಿ ಆಟಗಾರ ಹಾಗೂ ಹಾಲಿ ವೀಕ್ಷಕ ವಿವರಣೆಗಾರನಾಗಿ ಕೆಲಸ ಮಾಡುತ್ತಿರುವ ಹರ್ಷ ಭೋಗ್ಲೆ ಕೂಡ ಸೇರಿದ್ದಾರೆ.
ಹರ್ಷ ಭೋಗ್ಲೆ ಅವರ ಈ ವಿಡಿಯೋಗೆ ಕಾಮೆಂಟ್ ಮೂಲಕ ಉತ್ತರಿಸಿರುವ ಜೈಸ್ವಾಲ್,‘ಅವರು ಏನು ಹೇಳಿದರು ಎಂಬುದನ್ನು ನಿಮಗೆ ತಿಳಿಯದೆ ದಯವಿಟ್ಟು ಯಾವ ನಿರ್ಧಾರಕ್ಕೂ ಬರಬೇಡಿ. ಯಾರಾದರೂ ಗೆರೆ ದಾಟಿದರೆ, ಭಾರತ ಸರಿಯಾದ ತಿರುಗೇಟು ನೀಡುತ್ತದೆ ಎಂಬುದನ್ನು ನಾವು ಅವರಿಗೆ ಮನವರಿಕೆ ಮಾಡಿಕೊಡಬೇಕಿದೆ’ ಎಂದು ಬರೆದಿದ್ದಾರೆ.