ಕೊಲಂಬೋ, ಆ. 23 (DaijiworldNews/AA): ಭಾರತ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಯಶಸ್ವಿ ಜೈಸ್ವಾಲ್ ಹಾಗೂ ಅಸಿತಾ ಫೆರ್ನಾಂಡೋ ನಡುವೆ ಮೈದಾನದಲ್ಲೇ ತೀವ್ರ ವಾಕ್ಸಮರ ಮತ್ತು ನೂಕಾಟ ನಡೆದಿದೆ.

ಕೊಲಂಬೋದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ (SSC) ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ದ್ವಿತೀಯ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶುಭ್ಮನ್ ಗಿಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರು.
ಟಾಸ್ ಗೆದ್ದ ಬಳಿಕ ಭಾರತ ತಂಡಕ್ಕೆ ಯಶಸ್ವಿ ಜೈಸ್ವಾಲ್ ಆಕ್ರಮಣಕಾರಿ ಆರಂಭ ನೀಡಿದ್ದರು. 17ನೇ ಓವರ್ನಲ್ಲಿ ಶ್ರೀಲಂಕಾದ ವೇಗಿ ಅಸಿತಾ ಫೆರ್ನಾಂಡೋ ಬೌಲಿಂಗ್ಗೆ ಬಂದಾಗ, ಜೈಸ್ವಾಲ್ ಸತತ 3 ಬೌಂಡರಿಗಳನ್ನು ಬಾರಿಸಿದ್ದರು. ಆದರೆ, ಅದೇ ಓವರ್ನ ಕೊನೆಯ ಎಸೆತದಲ್ಲಿ ಫೆರ್ನಾಂಡೋ ಜೈಸ್ವಾಲ್ ವಿಕೆಟ್ ಪಡೆದರು. ವಿಕೆಟ್ ಪಡೆದ ತಕ್ಷಣ ಅಸಿತಾ ಫೆರ್ನಾಂಡೋ, ಅತಿಯಾದ ಸಂಭ್ರಮಾಚರಣೆ ನಡೆಸಿ, ಜೈಸ್ವಾಲ್ ಕಡೆಗೆ ನೋಡಿ ಕಟು ಮಾತುಗಳಿಂದ ‘ಸೆಂಡ್-ಆಫ್’ ನೀಡಿದರು.
ಔಟಾಗಿ ಪೆವಿಲಿಯನ್ ಕಡೆಗೆ ತೆರಳುತ್ತಿದ್ದ ಯಶಸ್ವಿ ಜೈಸ್ವಾಲ್, ಅಸಿತಾ ಫೆರ್ನಾಂಡೋ ಮಾತುಗಳನ್ನು ಕೇಳಿ ಅರ್ಧದಲ್ಲೇ ಹಿಂತಿರುಗಿದ್ದಾರೆ. ಬಳಿಕ ಜೈಸ್ವಾಲ್ ನೇರವಾಗಿ ಫೆರ್ನಾಂಡೋ ಅವರ ಮುಂದೆ ಬಂದು ನಿಂತಿದ್ದಾರೆ. ಇಬ್ಬರೂ ಆಟಗಾರರು ಅತ್ಯಂತ ಹತ್ತಿರ ಬಂದು ಪರಸ್ಪರ ಕೆಟ್ಟ ಪದಗಳಿಂದ ನಿಂದಿಸಿಕೊಂಡಿದ್ದಾರೆ. ಕೋಪದಲ್ಲಿದ್ದ ಜೈಸ್ವಾಲ್, ತಮ್ಮ ಹೆಲ್ಮೆಟ್ನಿಂದಲೇ ಫೆರ್ನಾಂಡೋ ಅವರ ಮುಖಕ್ಕೆ ಲಘುವಾಗಿ ಗುದ್ದಿದ್ದಾರೆ.
ಇದನ್ನು ಗಮನಿಸಿದ ಶ್ರೀಲಂಕಾ ತಂಡದ ನಾಯಕ ಧನಂಜಯ ಡಿ ಸಿಲ್ವಾ ಮತ್ತು ಮೈದಾನದ ಅಂಪೈರ್ಗಳು ತಕ್ಷಣವೇ ಇಬ್ಬರ ಮಧ್ಯೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಜೈಸ್ವಾಲ್ ಅವರನ್ನು ಸಮಾಧಾನಪಡಿಸಿ ಪೆವಿಲಿಯನ್ಗೆ ಕಳುಹಿಸಿಕೊಡಲಾಯಿತು.
ಸದ್ಯ ಭಾರತ ತಂಡ 3 ವಿಕೆಟ್ ಕಳೆದುಕೊಂಡು 187 ರನ್ ಕಲೆಹಾಕಿದೆ. ಇದೀಗ ಕ್ರೀಸ್ ನಲ್ಲಿ ದೇವದತ್ ಪಡಿಕ್ಕಲ್ ಹಾಗೂ ರಿಷಭ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾರೆ.