ಮುಂಬೈ, ಜು. 15 (DaijiworldNews/AA): ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನಡುವಿನ ಸಮನ್ವಯದ ಕೊರತೆಯಿಂದಾಗಿ ವೈಭವ್ ಸೂರ್ಯವಂಶಿಯನ್ನು ಪಾದಾರ್ಪಣೆಯ ನಿರ್ವಹಣೆ ಸಂಪೂರ್ಣ ವಿಫಲವಾಗಿದೆ. ಅವರು ಸಂಪೂರ್ಣವಾಗಿ ತಪ್ಪು ದಾರಿ ತುಳಿದಿದ್ದಾರೆ ಎಂದು ಭಾರತ ತಂಡದ ಮಾಜಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.

ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಅಂತರರಾಷ್ಟ್ರೀಯ ಪಾದಾರ್ಪಣೆಯ ನಿರ್ವಹಣೆ ಬಗ್ಗೆ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, "ವೈಭವ್ ಸೂರ್ಯವಂಶಿ ಅವರಂತಹ ಕಿರಿಯ ಆಟಗಾರನನ್ನು ಪರೀಕ್ಷಿಸಲು ಇಂಗ್ಲೆಂಡ್ನ ಬಲಿಷ್ಠ ವೇಗಿಗಳಿಗಿಂತ, ಐರ್ಲೆಂಡ್ ಸರಣಿ ಅತ್ಯಂತ ಸೂಕ್ತವಾಗಿತ್ತು. ಸೀನಿಯರ್ ಮತ್ತು ಜೂನಿಯರ್ ಆಟಗಾರರನ್ನು ರೊಟೇಟ್ ಮಾಡುವ ವಿಷಯದಲ್ಲಿ ತಂಡದಲ್ಲಿ ಯಾವುದೇ ಸ್ಪಷ್ಟ ಮಾರ್ಗದರ್ಶಿ ಸೂಚಿಗಳಿಲ್ಲ ಎಂಬುದು ಸಾಬೀತಾಗಿದೆ ಎಂದಿದ್ದಾರೆ.
"ಟಿ20 ವಿಶ್ವಕಪ್ ಹೀರೋ ಸಂಜು ಸ್ಯಾಮ್ಸನ್ ಅವರನ್ನು ಕೇವಲ ಮೂರು ಪಂದ್ಯಗಳ ವೈಫಲ್ಯದ ಬಳಿಕ ಕೈಬಿಟ್ಟು ವೈಭವ್ಗೆ ಅವಕಾಶ ನೀಡಲಾಯಿತು. ಆದರೆ, ವೈಭವ್ ಕೂಡ ಮೂರು ಪಂದ್ಯಗಳಲ್ಲಿ ಮಿಂಚದಿದ್ದಾಗ ಅಂತಿಮ ಟಿ20 ಪಂದ್ಯದಿಂದ ಅವರನ್ನೂ ಹೊರಗಿಡಲಾಯಿತು. ಇದು ಆಟಗಾರರಲ್ಲಿ ಅಭದ್ರತೆಯನ್ನು ಉಂಟುಮಾಡುತ್ತದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
"ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಭವಿಷ್ಯದ ತಂಡವನ್ನು ಕಟ್ಟುವ ನಿಟ್ಟಿನಲ್ಲಿ ಯುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲು ಬಯಸುತ್ತಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ತಕ್ಷಣದ ಸರಣಿ ಗೆಲುವುಗಳ ಮೇಲೆ ಕಣ್ಣಿಟ್ಟಿದ್ದು, ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಒತ್ತಡದಲ್ಲಿದ್ದಾರೆ. ಈ ಇಬ್ಬರ ವಿಭಿನ್ನ ಗುರಿಗಳಿಂದಾಗಿ ತಂಡದ ಒಳಗಿನ ವಾತಾವರಣದ ಮೇಲೆ ಪರಿಣಾಮ ಬೀರಿದೆ. ಇದರ ಫಲವಾಗಿಯೇ ಭಾರತ ತಂಡವು ಈ ಯುಕೆ ಪ್ರವಾಸದಲ್ಲಿ ಒಂದೂ ಸರಣಿ ಗೆಲ್ಲಲು ಸಾಧ್ಯವಾಗಲಿಲ್ಲ" ಎಂದು ಹೇಳಿದ್ದಾರೆ.