ಲಂಡನ್, ಜು. 12 (DaijiworldNews/TA): ಭಾರತದ ವಿರುದ್ಧ ನಡೆದ ಐದನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭರ್ಜರಿ ಗೆಲುವು ಸಾಧಿಸಿದ್ದು, ಸ್ಫೋಟಕ ಬ್ಯಾಟಿಂಗ್ ಮೂಲಕ ಶತಕ ಸಿಡಿಸಿದ ಜೋಸ್ ಬಟ್ಲರ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ ಮಹತ್ವದ ದಾಖಲೆಯನ್ನು ಹಿಂದಿಕ್ಕಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.

ದಿ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 20 ಓವರ್ಗಳಲ್ಲಿ 257 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 201 ರನ್ಗಳಿಗೆ ಸೀಮಿತವಾಗಿ 56 ರನ್ಗಳ ಅಂತರದಿಂದ ಸೋಲು ಕಂಡಿತು. ಇಂಗ್ಲೆಂಡ್ ಪರ ನಾಯಕ ಜೋಸ್ ಬಟ್ಲರ್ ಕೇವಲ 64 ಎಸೆತಗಳಲ್ಲಿ 131 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್ನಲ್ಲಿ 12 ಬೌಂಡರಿಗಳು ಹಾಗೂ 8 ಭರ್ಜರಿ ಸಿಕ್ಸರ್ಗಳು ಸೇರಿದ್ದವು. ಬಟ್ಲರ್ ಅವರ ಈ ಶತಕವೇ ಇಂಗ್ಲೆಂಡ್ಗೆ ಬೃಹತ್ ಮೊತ್ತ ದಾಖಲಿಸಲು ಪ್ರಮುಖ ಕಾರಣವಾಯಿತು.
ಈ ಶತಕದೊಂದಿಗೆ ಜೋಸ್ ಬಟ್ಲರ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ 117 ಇನಿಂಗ್ಸ್ಗಳಲ್ಲಿ 4,188 ರನ್ ಕಲೆಹಾಕಿದ್ದರೆ, ಜೋಸ್ ಬಟ್ಲರ್ 147 ಇನಿಂಗ್ಸ್ಗಳಲ್ಲಿ 4,212 ರನ್ಗಳನ್ನು ದಾಖಲಿಸಿ ಹೊಸ ಸಾಧನೆ ಮಾಡಿದ್ದಾರೆ.
ಸದ್ಯ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಭಾರತದ ರೋಹಿತ್ ಶರ್ಮಾ 4,231 ರನ್ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಪಾಕಿಸ್ತಾನದ ಬಾಬರ್ ಆಝಂ 4,596 ರನ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಪ್ರಸ್ತುತ ಫಾರ್ಮ್ನ್ನು ಗಮನಿಸಿದರೆ, ಬಟ್ಲರ್ ಇನ್ನೂ 385 ರನ್ಗಳನ್ನು ಗಳಿಸಿದರೆ ಬಾಬರ್ ಆಝಂ ಅವರ ದಾಖಲೆಯನ್ನೂ ಹಿಂದಿಕ್ಕಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಹೊಸ ವಿಶ್ವದಾಖಲೆ ಬರೆಯುವ ಅವಕಾಶ ಹೊಂದಿದ್ದಾರೆ.