ಮೆಲ್ಬೋರ್ನ್ , , ಜು. 10 (DaijiworldNews/AK):ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ಟಿ20 ಕ್ರಿಕೆಟ್ ಟೂರ್ನಿ ಬಿಗ್ ಬ್ಯಾಷ್ ಲೀಗ್ (BBL) ಇತಿಹಾಸದಲ್ಲೇ ಮೊದಲ ಬಾರಿಗೆ ತನ್ನ ಗಡಿ ದಾಟುತ್ತಿದ್ದು, 2026-27ರ ಋತುವಿನ ಭವ್ಯ ಉದ್ಘಾಟನಾ ಪಂದ್ಯಕ್ಕೆ ಭಾರತದ ಚೆನ್ನೈ ಆತಿಥ್ಯ ವಹಿಸಲಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ದಿನಗಳ ಆಸ್ಟ್ರೇಲಿಯಾ ಭೇಟಿಯ ಕೊನೆಯ ದಿನದಂದು ಆಸೀಸ್ ಪ್ರಧಾನಿ ಆಂಥೋನಿ ಅಲ್ಬನೀಸ್( ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಈ ವೇಳೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಲ್ಬನೀಸ್, ಬರುವ ಡಿಸೆಂಬರ್ನಲ್ಲಿ ಬಿಗ್ ಬ್ಯಾಷ್ ಲೀಗ್ನ ಉದ್ಘಾಟನಾ ಪಂದ್ಯ ಭಾರತದ ಚೆನ್ನೈನಲ್ಲಿ ನಡೆಯಲಿದೆ. ಇದು ಎರಡೂ ದೇಶಗಳ ನಡುವೆ ವಿಸ್ತರಿಸುತ್ತಿರುವ ಕ್ರೀಡಾ ಸಂಬಂಧದ ಸಂಕೇತವಾಗಿದೆ ಎಂದು ಹೆಮ್ಮೆಯಿಂದ ಪ್ರಕಟಿಸಿದರು.
ವಿಶ್ವದ ಪ್ರಮುಖ ಮತ್ತು ಅತ್ಯಂತ ಯಶಸ್ವಿ ಫ್ರಾಂಚೈಸಿ ಟಿ20 ಕ್ರಿಕೆಟ್ ಸ್ಪರ್ಧೆಗಳಲ್ಲಿ ಒಂದಾದ ಬಿಬಿಎಲ್, ಆಸ್ಟ್ರೇಲಿಯಾದ ಹೊರಗೆ ಅಧಿಕೃತ ಪಂದ್ಯವನ್ನು ಆಯೋಜಿಸುತ್ತಿರುವುದು ಇದೇ ಮೊದಲು. ಈ ಹಿಂದೆ ಭಾರತದ ಐಪಿಎಲ್ ಪಂದ್ಯಗಳು ಯುಎಇ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಆಯೋಜನೆಗೊಂಡಿದ್ದವು. ಆದರೆ, ವಿದೇಶಿ ಪ್ರೀಮಿಯರ್ ಲೀಗ್ವೊಂದು ಭಾರತದ ಮಣ್ಣಿನಲ್ಲಿ ಅಧಿಕೃತವಾಗಿ ಪಂದ್ಯವನ್ನು ಆಡುತ್ತಿರುವುದು ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಮೊದಲ ಘಟನೆಯಾಗಿದೆ.
ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಐಕಾನಿಕ್ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಎಂಸಿಜಿ ಮೈದಾನಕ್ಕೆ ಕಾಲಿಡುವುದು ಯಾವುದೇ ಒಬ್ಬ ಭಾರತೀಯನಲ್ಲಿ ಏಕಕಾಲದಲ್ಲಿ ಎರಡು ಭಾವನೆಗಳನ್ನು ಹುಟ್ಟುಹಾಕುತ್ತದೆ. ಮೊದಲನೆಯದಾಗಿ, ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ರೋಮಾಂಚನವಾದರೆ; ಎರಡನೆಯದಾಗಿ, ನಮ್ಮ ಎರಡೂ ರಾಷ್ಟ್ರಗಳಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಲ್ಲ, ಬದಲಾಗಿ ನಮ್ಮನ್ನು ಬೆಸೆಯುವ ಹಂಚಿಕೆಯ ಉತ್ಸಾಹ ಮತ್ತು ಸಂಸ್ಕೃತಿಯಾಗಿದೆ ಎಂಬ ಅರಿವು ಮೂಡಿಸುತ್ತದೆ ಎಂದು ಭಾವನಾತ್ಮಕವಾಗಿ ನುಡಿದರು.
ಇಂಡಿಯನ್ ಪ್ರೀಮಿಯರ್ ಲೀಗ್ನಂತೆ ಬಿಗ್ ಬ್ಯಾಷ್ ಲೀಗ್ ಕೂಡ ಆಸ್ಟ್ರೇಲಿಯಾದ ಪ್ರಮುಖ ವೃತ್ತಿಪರ ಟಿ20 ಕ್ರಿಕೆಟ್ ಟೂರ್ನಿಯಾಗಿದೆ. 2011 ರಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾದಿಂದ ಸ್ಥಾಪಿತವಾದ ಈ ಲೀಗ್, ಪ್ರತಿವರ್ಷ ಡಿಸೆಂಬರ್-ಫೆಬ್ರವರಿ ನಡುವೆ ನಡೆಯುತ್ತದೆ. ಎಂಟು ಫ್ರಾಂಚೈಸಿಗಳು ಇದರಲ್ಲಿ ಭಾಗವಹಿಸುತ್ತವೆ. ಇದು ವಿಶ್ವದ ಜನಪ್ರಿಯ ಟಿ20 ಲೀಗ್ಗಳಲ್ಲಿ ಒಂದಾಗಿದೆ.
ಬಿಬಿಎಲ್ನ ಫ್ರ್ಯಾಂಚೈಸಿಗಳು ಯಾವುದು?
ಮೆಲ್ಬೋರ್ನ್ ಸ್ಟಾರ್ಸ್, ಮೆಲ್ಬೋರ್ನ್ ರೆನೆಗೇಡ್ಸ್, ಸಿಡ್ನಿ ಸಿಕ್ಸರ್ಸ್, ಸಿಡ್ನಿ ಥಂಡರ್, ಪರ್ತ್ ಸ್ಕಾರ್ಚರ್ಸ್, ಅಡಿಲೇಡ್ ಸ್ಟ್ರೈಕರ್ಸ್, ಬ್ರಿಸ್ಬೇನ್ ಹೀಟ್ ಮತ್ತು ಹೋಬರ್ಟ್ ಹರಿಕೇನ್ಸ್.