ಮುಂಬೈ, ಜು. 09 (DaijiworldNews/AA): ಕೇವಲ 2 ಅಥವಾ 3 ಪಂದ್ಯಗಳ ಫಲಿತಾಂಶವನ್ನು ಆಧರಿಸಿ ಒಬ್ಬ ನಾಯಕನ ಸಾಮರ್ಥ್ಯವನ್ನು ನಿರ್ಣಯಿಸುವುದು ಸಂಪೂರ್ಣವಾಗಿ ತಪ್ಪು ಮತ್ತು ಅನ್ಯಾಯ ಎಂದು ಸೌತ್ ಆಫ್ರಿಕಾ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಟೀಮ್ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಪರ ಬ್ಯಾಟ್ ಬೀಸಿದ್ದಾರೆ.

ಐರ್ಲೆಂಡ್, ಇಂಗ್ಲೆಂಡ್ ವಿರುದ್ಧ ಟೀ ಇಂಡಿಯಾ ಸತತ ಸೋಲು ಅನುಭವಿಸಿದ ಬೆನ್ನಲ್ಲೇ ಅಯ್ಯರ್ ಅವರ ನಾಯಕತ್ವದ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಇದೀಗ ಅಯ್ಯರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಡಿವಿಲಿಯರ್ಸ್ "ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಹೊಂದಿರುವ ಅಯ್ಯರ್, ಮೈದಾನದಲ್ಲಿ ತೋರುವ ಶಾಂತ ಮತ್ತು ಸಂಯಮದ ವರ್ತನೆ ತಂಡಕ್ಕೆ ದೊಡ್ಡ ಬಲ. ಐಪಿಎಲ್ನಲ್ಲಿ ಕಠಿಣ ಸಂದರ್ಭಗಳಲ್ಲೂ ತಂಡವನ್ನು ಮುನ್ನಡೆಸಿದ ಅವರ ಈ ಗುಣವೇ ಅವರನ್ನು ಅತ್ಯುತ್ತಮ ನಾಯಕನನ್ನಾಗಿ ಮಾಡುತ್ತದೆ. ಹೀಗಾಗಿ ಆರಂಭದಲ್ಲೇ ಶ್ರೇಯಸ್ ಅಯ್ಯರ್ ನಾಯಕತ್ವವನ್ನು ದೂರುವುದರಲ್ಲಿ ಅರ್ಥವಿಲ್ಲ" ಎಂದು ತಿಳಿಸಿದ್ದಾರೆ.
"ಶ್ರೇಯಸ್ ಅಯ್ಯರ್ ಅವರಿಗೆ ನಾಯಕನಾಗಿ ತಮ್ಮನ್ನು ತಾವು ಸಾಬೀತುಪಡಿಸಲು ದೀರ್ಘಾವಧಿಯ ಅವಕಾಶವನ್ನು ನೀಡಬೇಕು. ಒಂದಷ್ಟು ಕಾಲಾವಕಾಶ ನೀಡಿ, ಶ್ರೇಯಸ್ ಅಯ್ಯರ್ ಅವರ ನಾಯಕತ್ವ ಹೇಗಿರಲಿದೆ ಎಂಬುದು ಗೊತ್ತಾಗಲಿದೆ. ಹೊಸ ನಾಯಕನಿಗೆ ಹೊಂದಿಕೊಳ್ಳಲು ಸಮಯದ ಅಗತ್ಯವಿದೆ" ಎಂದಿದ್ದಾರೆ.