ವೆಲ್ಲಿಂಗ್ಟನ್, ಜೂ. 12 (DaijiworldNews/AA): ನ್ಯೂಜಿಲೆಂಡ್ ಕ್ರಿಕೆಟ್ ದಂತಕಥೆ ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.

ವಿಲಿಯಮ್ಸನ್ ಅವರು ಹಠಾತ್ ವಿದಾಯ ಘೋಷಿಸಿರುವುದರಿಂದ ಪ್ರಸ್ತುತ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಕಳೆದ ವರ್ಷವೇ ಅವರು ಅಂತಾರರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಗುಡ್ಬೈ ಹೇಳಿದ್ದರು. ಇದೀಗ ಎಲ್ಲಾ ಸ್ವರೂಪದ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ 16 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
"ನಾನು ವಿದಾಯ ಘೋಷಿಸಲು ಸಾಕಷ್ಟು ಸಮಯದಿಂದ ಯೋಚಿಸುತ್ತಿದ್ದೆ. ಆದರೆ ಕಳೆದ ಕೆಲವು ದಿನಗಳಿಂದ ನಿವೃತ್ತಿ ಹೇಳಲು ಇದೇ ಸರಿಯಾದ ಸಮಯ ಎನ್ನುವುದು ನನಗೆ ಸ್ಪಷ್ಟವಾಯಿತು. ನ್ಯೂಜಿಲೆಂಡ್ ಪರ ಆಡಿದ ಪ್ರತಿ ಪಂದ್ಯದಲ್ಲೂ ಶೇ.100 ರಷ್ಟು ಶ್ರಮ ಹಾಕಿದ್ದೇನೆ ಎನ್ನುವ ಹೆಮ್ಮೆ ನನಗಿದೆ" ಎಂದು ಅವರು ತಮ್ಮ ನಿವೃತ್ತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
"ನನಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೇಲಿನ ಹಸಿವು ಮತ್ತು ಉತ್ಸಾಹ ತುಂಬಾ ಇತ್ತು. ಆದರೆ ಈಗ ಆ ಶ್ರಮ ಹಾಕಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮುಂದುವರೆಯುವುದು ಸರಿಯಲ್ಲ ಎಂದು ಭಾವಿಸಿ ಈ ನಿರ್ಧಾರ ಕೈಗೊಂಡಿದ್ದೇನೆ. ಪ್ರಸ್ತುತ ನ್ಯೂಜಿಲೆಂಡ್ ತಂಡವು ಸಾಗುತ್ತಿರುವ ಹಾದಿಯ ಬಗ್ಗೆ ನನಗೆ ತುಂಬಾ ಭರವಸೆ ಇದೆ. ತಂಡದಲ್ಲಿ ಬಹಳಷ್ಟು ಯುವ ಪ್ರತಿಭೆಗಳಿದ್ದು, ವಿಶೇಷ ಸಾಧನೆ ಮಾಡುವ ತುಡಿತ ಅವರಲ್ಲಿದೆ. ನಾನು ಸುದೀರ್ಘವಾಗಿ ಈ ತಂಡದ ಭಾಗವಾಗಿದ್ದಕ್ಕೆ ನನ್ನಲ್ಲಿ ಧನ್ಯತಾ ಭಾವವಿದೆ" ಎಂದು ತಿಳಿಸಿದ್ದಾರೆ.