ಕ್ಯಾನ್ಬೆರಾ, ಜೂ. 11 (DaijiworldNews/TA): ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಭಾರತೀಯ ಮೂಲದ ಆಲ್ರೌಂಡರ್ ನಿಖಿಲ್ ಚೌಧರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ನೀಡಲಾಗಿದೆ. ಈ ಮೂಲಕ ನಿಖಿಲ್ ಆಸ್ಟ್ರೇಲಿಯಾ ಪರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಆರಂಭದಲ್ಲಿ ಪ್ರಕಟಿಸಲಾಗಿದ್ದ ಆಸ್ಟ್ರೇಲಿಯಾ ಟಿ20 ತಂಡದಲ್ಲಿ ನಿಖಿಲ್ ಹೆಸರು ಇರಲಿಲ್ಲ. ಆದರೆ ವೈಯಕ್ತಿಕ ಕಾರಣಗಳಿಂದ ಟ್ರಾವಿಸ್ ಹೆಡ್ ಸರಣಿಯಿಂದ ಹೊರಗುಳಿದ ಹಿನ್ನೆಲೆ, ಅವರ ಬದಲಿಯಾಗಿ ನಿಖಿಲ್ ಚೌಧರಿಯನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ದೆಹಲಿ ಮೂಲದ ನಿಖಿಲ್ ಚೌಧರಿ ಈ ಹಿಂದೆ ಪಂಜಾಬ್ ಪರ ದೇಶೀಯ ಕ್ರಿಕೆಟ್ ಆಡಿದ್ದರು. ಬಳಿಕ ಆಸ್ಟ್ರೇಲಿಯಾಕ್ಕೆ ತೆರಳಿ ತಮ್ಮ ಕ್ರಿಕೆಟ್ ವೃತ್ತಿಜೀವನ ಮುಂದುವರಿಸಿದ್ದರು. ಹೋಬರ್ಟ್ ಹರಿಕೇನ್ಸ್ ಪರ ಬಿಗ್ ಬ್ಯಾಷ್ ಲೀಗ್ನಲ್ಲಿ ಆಲ್ರೌಂಡರ್ ಆಗಿ ಗಮನಾರ್ಹ ಪ್ರದರ್ಶನ ನೀಡಿದ್ದ ಅವರು, ಇದೀಗ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಆಯ್ಕೆದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಟ್ರೇಲಿಯಾ ತಂಡದಲ್ಲಿ ಈ ಹಿಂದೆ ಭಾರತೀಯ ಮೂಲದ ತನ್ವೀರ್ ಸಂಘ, ಹಾಗೂ ಗುರಿಂದರ್ ಸಂಧು ಸೇರಿದಂತೆ ಕೆಲವು ಆಟಗಾರರು ಕಾಣಿಸಿಕೊಂಡಿದ್ದರು. ಆದರೆ ಅವರು ಆಸ್ಟ್ರೇಲಿಯಾದಲ್ಲೇ ಜನಿಸಿದವರಾಗಿದ್ದರು. ನಿಖಿಲ್ ಚೌಧರಿ ಮಾತ್ರ ಪಂಜಾಬ್ನಲ್ಲಿ ಜನಿಸಿ ಅಲ್ಲಿಯೇ ಕ್ರಿಕೆಟ್ ಕಲಿತು ಬೆಳೆದ ಆಟಗಾರ. ಹೀಗಾಗಿ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದಲ್ಲಿ ಅವರ ಆಯ್ಕೆ ವಿಶೇಷ ಮಹತ್ವ ಪಡೆದಿದೆ.
ಇದಕ್ಕೂ ಮುನ್ನ 1960ರ ದಶಕದಲ್ಲಿ ಭಾರತೀಯ ಮೂಲದ ರೂಸಿ ಸೂರ್ತಿ ಆಸ್ಟ್ರೇಲಿಯಾದ ಕ್ರಿಕೆಟ್ ವಲಯದಲ್ಲಿ ಗುರುತಿಸಿಕೊಂಡಿದ್ದರು. ಇದೀಗ ಸುಮಾರು ಆರು ದಶಕಗಳ ಬಳಿಕ ಭಾರತದಲ್ಲಿ ಜನಿಸಿದ ಕ್ರಿಕೆಟಿಗನೊಬ್ಬ ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯುವ ಅವಕಾಶ ಪಡೆದಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ನಾಯಕ ಮಿಚೆಲ್ ಮಾರ್ಷ್ ನೇತೃತ್ವದ ತಂಡದಲ್ಲಿ ಜೋಶ್ ಇಂಗ್ಲಿಸ್, ಜೋಶ್ ಫಿಲಿಪ್ಪೆ, ಟಿಮ್ ಡೇವಿಡ್, ಮ್ಯಾಟ್ ರೆನ್ಶಾ, ನಿಖಿಲ್ ಚೌಧರಿ, ಕ್ಯಾಮರೋನ್ ಗ್ರೀನ್, ಆರೋನ್ ಹಾರ್ಡಿ, ಕೂಪರ್ ಕೊನೊಲಿ, ಜೋಯಲ್ ಡೇವಿಸ್, ಆಡಂ ಝಂಪಾ, ಕ್ಸೇವಿಯರ್ ಬಾರ್ಟ್ಲೆಟ್, ನಾಥನ್ ಎಲ್ಲಿಸ್, ಸ್ಪೆನ್ಸರ್ ಜಾನ್ಸನ್, ಮ್ಯಾಥ್ಯೂ ಕುಹ್ನೆಮನ್ ಹಾಗೂ ರೈಲಿ ಮೆರೆಡಿತ್ ಸ್ಥಾನ ಪಡೆದಿದ್ದಾರೆ.