ಮುಂಬೈ, ಜೂ. 10 (DaijiworldNews/AA): ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಕನ್ನಡಿಗ ವೇಗಿ ಪ್ರಸಿದ್ಧ್ ಕೃಷ್ಣ ಅವರು ಆಯ್ಕೆಯಾಗಿದ್ದಾರೆ.

ಭಾರತ ತಂಡದ ಸ್ಟಾರ್ ವೇಗಿ ಮೊಹಮದ್ ಸಿರಾಜ್ ಅವರಿಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಇದೀಗ ಅವರ ಸ್ಥಾನಕ್ಕೆ ಪ್ರಸಿದ್ಧ್ ಕೃಷ್ಣ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.
ಈ ಕುರಿತು ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, 'ಮುಂದಿನ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು, ಸಿರಾಜ್ ಅವರ ಕಾರ್ಯದೊತ್ತಡವನ್ನು ತಗ್ಗಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ತಿಳಿಸಿದೆ
ಇತ್ತೀಚಿಗೆ 2 ಸರಣಿಗಳಿಗೆ ಬಿಸಿಸಿಐ ಪ್ರಕಟಿಸಿದ ಭಾರತ ತಂಡದಲ್ಲಿ ಮೊಹಮ್ಮದ್ ಸಿರಾಜ್ ಸ್ಥಾನ ಪಡೆದುಕೊಂಡಿದ್ದರು. ಆದರೆ ಇದೀಗ ಬಿಸಿಸಿಐ, ಸಿರಾಜ್ ಬದಲಿಗೆ ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆ ಮಾಡಿದೆ. ಐಪಿಎಲ್ ಬಳಿಕ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ಸಿರಾಜ್ ಭಾಗವಹಿಸಿದ್ದರು. ಹೀಗಾಗಿ ನಿರಂತರ ಕ್ರಿಕೆಟ್ ಆಡುತ್ತಿರುವ ಕಾರಣ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಬಿಸಿಸಿಐ ವೈದ್ಯಕೀಯ ತಂಡ ಮತ್ತು ತಂಡದ ಆಡಳಿತ ಮಂಡಳಿ ಜಂಟಿಯಾಗಿ ಈ ತೀರ್ಮಾನಕ್ಕೆ ಬಂದಿವೆ.