ಮುಂಬೈ, ಜೂ. 08 (DaijiworldNews/AK): ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಸಂಚಲನ ಸೃಷ್ಟಿಸಿದ ರಾಜಸ್ಥಾನ್ ರಾಯಲ್ಸ್ ತಂಡದ ಯುವ ದಾಂಡಿಗ ವೈಭವ್ ಸೂರ್ಯವಂಶಿ ತಾನು ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಟ್ಟಾಭಿಮಾನಿ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅದು ಸಹ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರುವಾಗ ಎಂಬುದು ವಿಶೇಷ.

ಆರ್ಆರ್ ತಂಡದ ಸಂದರ್ಶನದಲ್ಲಿ ಮಾತನಾಡಿದ ವೈಭವ್, “ನಾನು ಮೊದಲಿನಿಂದಲೂ ಆರ್ಸಿಬಿ ತಂಡದ ದೊಡ್ಡ ಅಭಿಮಾನಿ. ಅದಕ್ಕೆ ಏಕೈಕ ಕಾರಣ ವಿರಾಟ್ ಕೊಹ್ಲಿ ಭೈಯ್ಯಾ ಎಂದಿದ್ದಾರೆ. ಮೊದಲಿಂದಲೂ ನಾನು ವಿರಾಟ್ ಕೊಹ್ಲಿ ಫ್ಯಾನ್. ಹಾಗೆಯೇ ಆರ್ಸಿಬಿ ತಂಡದ ಅಭಿಮಾನಿ. ಆರ್ಆರ್-ಆರ್ಸಿಬಿ ಪಂದ್ಯ ಮುಗಿದ ನಂತರ ಕೊಹ್ಲಿ ನನ್ನ ಬಳಿ ಬಂದು ಹೆಗಲ ಮೇಲೆ ಕೈಹಾಕಿ ಮಾತನಾಡಿಸಿದಾಗ, ನಾನು ಒಬ್ಬ ಜಾಗತಿಕ ಸೂಪರ್ಸ್ಟಾರ್ ಜೊತೆ ಮಾತನಾಡುತ್ತಿದ್ದೇನೆ ಅನಿಸಲೇ ಇಲ್ಲ ಎಂದು ವೈಭವ್ ಸೂರ್ಯವಂಶಿ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಅವರು ನನ್ನ ಸ್ವಂತ ಅಣ್ಣನಂತೆ. ಪಂದ್ಯದ ಬಳಿಕ ನನಗೆ ಅತ್ಯಂತ ಪ್ರೀತಿಯಿಂದ ಮಾರ್ಗದರ್ಶನ ನೀಡಿದರು. ಅವರು ಎಲ್ಲೂ ಸಹ ನನ್ನೊಂದಿಗೆ ಸೂಪರ್ ಸ್ಟಾರ್ ರೀತಿ ವರ್ತಿಸಿರಲಿಲ್ಲ. ಅವರು ನನ್ನ ಜೊತೆ ಮಾತನಾಡುವಾಗ ನನಗೂ ಕೂಡ ಅವರು ಜಾಗತಿಕ ಸೂಪರ್ ಸ್ಟಾರ್ ಎಂದು ಅನಿಸಿರಲಿಲ್ಲ ಎಂದು ವೈಭವ್ ಕಿಂಗ್ ಕೊಹ್ಲಿಯ ಸರಳತೆ ಮತ್ತು ದೊಡ್ಡ ಗುಣವನ್ನು ಕೊಂಡಾಡಿದ್ದಾರೆ.
ವಿಶೇಷವೆಂದರೆ, ಟೂರ್ನಿಯ ಆರಂಭಿಕ ಪಂದ್ಯವೊಂದರಲ್ಲಿ ಆರ್ಸಿಬಿ ವಿರುದ್ಧ ವೈಭವ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದಾಗ, ವಿರಾಟ್ ಕೊಹ್ಲಿ ಖುದ್ದಾಗಿ ಅವರಿಗೆ ಆಟೋಗ್ರಾಫ್ ಇರುವ ವಿಶೇಷ ಕ್ಯಾಪ್ ಒಂದನ್ನು ಉಡುಗೊರೆಯಾಗಿ ನೀಡಿದ್ದರು. ಆರೆಂಜ್ ಕ್ಯಾಪ್ ಕೈಯಲ್ಲಿಲ್ಲದ ದಿನಗಳಲ್ಲೆಲ್ಲಾ ತಾವು ಕೊಹ್ಲಿ ನೀಡಿದ ಆ ಕ್ಯಾಪ್ ಅನ್ನೇ ಧರಿಸುತ್ತಿದ್ದಾಗಿ ವೈಭವ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇದೀಗ ಐಪಿಎಲ್ ಸೀಸನ್-19ರ ಆರೆಂಜ್ ಕ್ಯಾಪ್ ಹುಡುಗ ಟೀಮ್ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದಾರೆ. ಮುಂಬರುವ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಅಥವಾ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ಇದರೊಂದಿಗೆ ಜಾಗತಿಕ ಕ್ರಿಕೆಟ್ನಲ್ಲಿ ಹೊಸ ಯುಗ ಆರಂಭವಾಗುವುದನ್ನು ನಿರೀಕ್ಷಿಸಬಹುದು.