ಮುಂಬೈ, ಜೂ. 07 (DaijiworldNews/AA): ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಅವರನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ತಿಳಿಸಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ನಾಯಕತ್ವದಿಂದ ಕೆಳಗಿಳಿಸಿರುವ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್ ಅವರು, "ಸೂರ್ಯಕುಮಾರ್ ಯಾದವ್ ಅವರನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗಿದೆ. 2028 ರಲ್ಲಿ ಟಿ20 ವಿಶ್ವಕಪ್ ಮತ್ತು ಒಲಿಂಪಿಕ್ಸ್ ಇದೆ. ಹೀಗಾಗಿ ಕನಿಷ್ಠ ಮುಂಬರುವ ಇಂಗ್ಲೆಂಡ್ ಸರಣಿಯವರೆಗೆ ಅವರಿಗೆ ಅವಕಾಶ ನೀಡಬೇಕಿತ್ತು. ಆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅವರ ಪ್ರದರ್ಶನವನ್ನು ನೋಡಿದ ನಂತರವೇ ಆಯ್ಕೆದಾರರು ನಿರ್ಧಾರಕ್ಕೆ ಬಂದಿದ್ದರೆ ಉತ್ತಮವಾಗಿರುತ್ತಿತ್ತು. ಆದರೆ 2026 ರ ಐಪಿಎಲ್ನಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಳಪೆ ಪ್ರದರ್ಶನ ಆಯ್ಕೆದಾರರ ಈ ನಿರ್ಧಾರಕ್ಕೆ ಕಾರಣವಾಗಿರಬಹುದು" ಎಂದಿದ್ದಾರೆ.
"ಬದಲಾವಣೆ ಈಗಲೇ ಆರಂಭವಾಗಬೇಕು ಎಂದು ಆಯ್ಕೆದಾರರು ಭಾವಿಸಿರಬಹುದು. ಸೂರ್ಯಗೆ ಈಗ 35 ಅಥವಾ 36 ವರ್ಷ. 2028 ರ ಹೊತ್ತಿಗೆ ಅವರಿಗೆ 38 ವರ್ಷ ವಯಸ್ಸಾಗಿರುತ್ತದೆ. ಆ ಸಮಯದಲ್ಲಿ, ನಾವು ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲಲು ಅಥವಾ ವಿಶ್ವಕಪ್ ಉಳಿಸಿಕೊಳ್ಳಲು ಬಯಸಿದರೆ, ನಮಗೆ ಯುವ ನಾಯಕನ ಅಗತ್ಯವಿದೆ. ಅದಕ್ಕಾಗಿಯೇ ಶ್ರೇಯಸ್ ಅಯ್ಯರ್ ಅವರಂತಹ ಅನುಭವ ಹೊಂದಿರುವ ಯುವ ಆಟಗಾರನನ್ನು ಆಯ್ಕೆ ಮಾಡಿರಬಹುದು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಮಹೇಂದ್ರ ಸಿಂಗ್ ಧೋನಿಯಂತೆ ಸೂರ್ಯ ಮೈದಾನದಲ್ಲಿ ತುಂಬಾ ಶಾಂತವಾಗಿದ್ದರು. ಸೂರ್ಯ ತಂಡಕ್ಕೆ ತನ್ನ ಶಾಂತ ಸ್ವಭಾವವನ್ನು ಪರಂಪರೆಯಾಗಿ ಬಿಟ್ಟು ಹೋಗಿದ್ದಾರೆ. ಕಠಿಣ ಸಂದರ್ಭಗಳಲ್ಲಿಯೂ ಒತ್ತಡಕ್ಕೆ ಒಳಗಾಗದೆ ತಂಡವನ್ನು ಮುನ್ನಡೆಸುವಲ್ಲಿ ಅವರು ಧೋನಿಯಂತೆಯೇ ಇದ್ದರು" ಎಂದು ಹೇಳಿದ್ದಾರೆ.