ಮುಂಬೈ, ಜೂ. 07 (DaijiworldNews/TA): ಭಾರತೀಯ ಕ್ರಿಕೆಟ್ನ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿ ಅವರು ಕೇವಲ 15ನೇ ವಯಸ್ಸಿನಲ್ಲೇ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಇಂಗ್ಲೆಂಡ್ ಮತ್ತು ಐರ್ಲೆಂಡ್ ವಿರುದ್ಧದ ಟಿ20 ಸರಣಿಗಳಿಗಾಗಿ ಆಯ್ಕೆಯಾಗಿರುವ ಯುವ ಆಟಗಾರನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ವಿಶೇಷ ಸೌಲಭ್ಯವನ್ನೂ ಕಲ್ಪಿಸಿದೆ.

ವೈಭವ್ ಅಪ್ರಾಪ್ತ ವಯಸ್ಸಿನ ಆಟಗಾರನಾಗಿರುವುದರಿಂದ, ವಿದೇಶ ಪ್ರವಾಸದ ವೇಳೆ ಅವರೊಂದಿಗೆ ಪೋಷಕರು ಅಥವಾ ಕುಟುಂಬ ಸದಸ್ಯರು ಪ್ರಯಾಣಿಸಲು BCCI ಅನುಮತಿ ನೀಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ನ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಹಾಗೂ ಮಾನಸಿಕ ಬೆಂಬಲ ಒದಗಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಈ ಕುರಿತು ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, “ವೈಭವ್ ಇನ್ನೂ ಅಪ್ರಾಪ್ತ ವಯಸ್ಸಿನ ಆಟಗಾರ. ಈವರೆಗೆ ತನ್ನ ವಯೋಮಾನದ ತಂಡಗಳೊಂದಿಗೆ ವಿದೇಶ ಪ್ರವಾಸ ಕೈಗೊಂಡಿದ್ದರೂ, ಹಿರಿಯರ ರಾಷ್ಟ್ರೀಯ ತಂಡದ ವಾತಾವರಣ ವಿಭಿನ್ನವಾಗಿರುತ್ತದೆ. ಈ ಸಂದರ್ಭದಲ್ಲಿ ಕುಟುಂಬದ ಬೆಂಬಲ ಅಗತ್ಯವೆನ್ನುವ ಕಾರಣಕ್ಕೆ ಪೋಷಕರು ಜೊತೆಗಿರಲು ಅವಕಾಶ ನೀಡಲಾಗಿದೆ” ಎಂದು ಹೇಳಿದ್ದಾರೆ.
ಇಂಗ್ಲೆಂಡ್ ಪ್ರವಾಸದ ವೇಳೆ ವೈಭವ್ ಅವರ ಕುಟುಂಬ ಸದಸ್ಯರು ಜೊತೆಗಿರಲು ಬಯಸಿದರೆ ಅಗತ್ಯ ವ್ಯವಸ್ಥೆಗಳನ್ನು ಬಿಸಿಸಿಐ ಮಾಡಲಿದೆ. ಆದರೆ ಈ ಸೌಲಭ್ಯ ಇತರ ಆಟಗಾರರಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪ್ರಸ್ತುತ ವೈಭವ್ ಸೂರ್ಯವಂಶಿ ಶ್ರೀಲಂಕಾದಲ್ಲಿ ಭಾರತ 'ಎ' ತಂಡದೊಂದಿಗೆ ತ್ರಿಕೋನ ಸರಣಿಯಲ್ಲಿ ಪಾಲ್ಗೊಂಡಿದ್ದಾರೆ. ಅವರ ಪ್ರದರ್ಶನ ಆಯ್ಕೆದಾರರ ಗಮನ ಸೆಳೆದಿದ್ದು, ಹಿರಿಯ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆಯಲು ಕಾರಣವಾಗಿದೆ.
ಐಪಿಎಲ್ 2026ರಲ್ಲಿ ವೈಭವ್ ಸೂರ್ಯವಂಶಿ ಭರ್ಜರಿ ಪ್ರದರ್ಶನ ನೀಡಿದ್ದರು. ಟೂರ್ನಿಯಲ್ಲಿ 776 ರನ್ಗಳಿಸಿ ಆರೆಂಜ್ ಕ್ಯಾಪ್ ಹಾಗೂ ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್ (MVP) ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದರು. ಅವರ ನಿರಂತರ ಪ್ರದರ್ಶನದ ಫಲವಾಗಿ ಇದೀಗ ಭಾರತದ ಟಿ20 ತಂಡದಲ್ಲಿ ಮೊದಲ ಬಾರಿಗೆ ಅವಕಾಶ ಲಭಿಸಿದೆ.
15ನೇ ವಯಸ್ಸಿನಲ್ಲೇ ರಾಷ್ಟ್ರೀಯ ತಂಡದ ಜರ್ಸಿ ತೊಡಲಿರುವ ವೈಭವ್ ಸೂರ್ಯವಂಶಿ, ಭಾರತೀಯ ಕ್ರಿಕೆಟ್ನ ಭವಿಷ್ಯದ ಭರವಸೆಯ ತಾರೆಯಾಗಿ ಗುರುತಿಸಿಕೊಂಡಿದ್ದಾರೆ.