ಮುಂಬೈ, ಜೂ. 04 (DaijiworldNews/AA): ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಗಾಯದ ಕಾರಣದಿಂದ ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.

ಜೂನ್ 13ರಿಂದ ಧರ್ಮಶಾಲಾದಲ್ಲಿ ಭಾರತ-ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿ ಆರಂಭವಾಗಲಿದೆ. ಹ್ಯಾಮ್ಸ್ಟ್ರಿಂಗ್ (ಸ್ನಾಯು ಸೆಳೆತ) ಗಾಯದ ಸಮಸ್ಯೆಯಿಂದ ಕೊಹ್ಲಿ ಈ ಸರಣಿಯಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
2026 ರ ಐಪಿಎಲ್ನಲ್ಲಿ ಆರ್ಸಿಬಿ ತಂಡ ಚಾಂಪಿಯನ್ ಆಗುವಲ್ಲಿ ವಿರಾಟ್ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಅಜೇಯ 75 ರನ್ಗಳ ಇನ್ನಿಂಗ್ಸ್ ಆಡಿ ತಂಡದ ಗೆಲುವಿಗೆ ಕಾರಣರಾಗಿದ್ದರು.
ಗುಜರಾತ್ ವಿರುದ್ಧದ ಇದೇ ಪಂದ್ಯದ ವೇಳೆ ಕೊಹ್ಲಿ ಗಾಯಕ್ಕೆ ತುತ್ತಾಗಿದ್ದರು. ಬ್ಯಾಟಿಂಗ್ ಮಾಡುವ ವೇಳೆ ಕೊಹ್ಲಿ ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಪಂದ್ಯವನ್ನು ಹಲವಾರು ಬಾರಿ ನಿಲ್ಲಿಸಬೇಕಾಯಿತು. ಆದರೂ ಕ್ರೀಸ್ನಲ್ಲಿ ದೃಢವಾಗಿ ನಿಂತು ತಂಡಕ್ಕೆ ಗೆಲುವು ತಂದುಕೊಟ್ಟರು.