ಚೆನ್ನೈ,ಜೂ. 04 (DaijiworldNews/AK): ಪ್ರಾಮಾಣಿಕವಾಗಿ ನಾನು ಕ್ರಿಕೆಟ್ ಆಡಿದ್ದು ನನ್ನ ವೈಯಕ್ತಿಕ ಕಾರಣಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

ಗುರುವಾರ ಸಂಜೆ ಚೆನ್ನೈನ ಮದ್ರಾಸ್ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಆಯೋಜಿಸಿದ್ದ ಫೆಡರಲ್ ಬ್ಯಾಂಕ್ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶ್ಯಾಮ್ ಶ್ರೀನಿವಾಸನ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಾಮಾಣಿಕವಾಗಿ ಹೇಳುತ್ತೇನೆ ನಾನು ಕ್ರಿಕೆಟ್ ಆಡಿದ್ದು ನನ್ನ ವೈಯಕ್ತಿಕ ಕಾರಣಕ್ಕಾಗಿಯೇ ಹೊರತು ದೇಶಕ್ಕಾಗಿ ಅಲ್ಲ. ಆಟ ಆಡುವುದರಿಂದ ನನಗೆ ಖುಷಿ ಸಿಗುತ್ತಿತ್ತು. ಒಂದು ವೇಳೆ ಯಾರಾದರೂ ನಾನು ದೇಶಕ್ಕಾಗಿ ಕ್ರಿಕೆಟ್ ಆಡಿದೆ ಎಂದು ಹೇಳಿದರೆ ಅದು ಸುಳ್ಳು. ನಾವು ನಮಗಾಗಿ ಕ್ರಿಕೆಟ್ ಆಡುತ್ತೇವೆ ಇದೇ ಸತ್ಯ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡುತ್ತಾ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ಕಪಿಲ್ ದೇವ್, ನಾನು ಓದುವ ವಿಚಾರದಲ್ಲಿ ತುಂಬಾ ದಡ್ಡನಾಗಿದ್ದೆ. ಆದ್ದರಿಂದ ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಕ್ರಿಕೆಟ್ ಸಹಾಯ ಮಾಡಿತು. ಆರಂಭದಲ್ಲಿ ನಾನು ಭಾರತ ತಂಡದ ಪರ ಕ್ರಿಕೆಟ್ ಆಡುತ್ತೇನೆ ಅಂತ ಅಂದುಕೊಂಡೇ ಇರಲಿಲ್ಲ. ಆ ಸಮಯದಲ್ಲಿ ಫುಟ್ಬಾಲ್ ಆಡಿದರೆ ಕೇವಲ ಒಂದು ಗಂಟೆ ಮಾತ್ರ ಕ್ಲಾಸ್ನಿಂದ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಕ್ರಿಕೆಟ್ ಆಡಿದರೆ ಮೂರು ದಿನಗಟ್ಟಲೆ ಕ್ಲಾಸ್ ತಪ್ಪಿಸಿಕೊಳ್ಳಬಹುದಿತ್ತು. ಅದಕ್ಕಾಗಿಯೇ ನಾನು ಕ್ರಿಕೆಟ್ ಆಡಲು ಶುರು ಮಾಡಿದೆ ಎಂದು ಹೇಳಿದ್ದಾರೆ.
ಇವತ್ತಿನ ಡಿಜಿಟಲ್ ಯುಗದಲ್ಲಿ ಫೋನ್ ಬಿಟ್ಟು ಪುಸ್ತಕ ಓದಿ. ಈ ಸ್ಮಾರ್ಟ್ ಫೋನ್ ಬಳಕೆಯ ಭರಾಟೆಯಲ್ಲಿ ಜನರು ಓದುವುದನ್ನೇ ಮರೆತಿದ್ದಾರೆ. ಯಾರೋ ಕಷ್ಟಪಟ್ಟು ಪುಸ್ತಕ ಬರೆಯುತ್ತಾರೆ. ಆದರೆ, ನಮ್ಮ ಜನಗಳಿಗೆ ಓದಲು ಸಮಯವೇ ಇರುವುದಿಲ್ಲ. ಆಗ ಪುಸ್ತಗಳನ್ನು ಬರೆಯುವುದರಿಂದ ಉಪಯೋಗ ಏನು? ಹಾಗಾಗಿ ನಾವೆಲ್ಲರೂ ನಮ್ಮ ಬದುಕಿನ ಅಮೂಲ್ಯವಾದ ಸಮಯವನ್ನು ಪುಸ್ತಕ ಓದಲು ವ್ಯಯಿಸಬೇಕು ಎಂದು ಕಿವಿಮಾತು ಹೇಳಿದರು.
ಒಂದು ದಿನಕ್ಕೆ ಕನಿಷ್ಠ 2 ಪುಟಗಳನ್ನಾದರೂ ಓದಲು ಪ್ರಯತ್ನಿಸಿ. 2 ಪುಟ ಓದಿ ಅಂತ ಯಾಕೆ ಹೇಳಿದ್ದೇನೆ ಅಂದರೆ ನನಗೆ ಅಷ್ಟೇ ಓದಲು ಸಾಧ್ಯವಾಗುತ್ತದೆ ಎಂದು ಹಾಸ್ಯಾತ್ಮಕವಾಗಿ ಅವರು ಸಲಹೆ ನೀಡಿದ್ದಾರೆ.