ಮುಂಬೈ, ಜೂ. 04 (DaijiworldNews/AK): ಟಿ20 ವಿಶ್ವಕಪ್ ಹಾಗೂ ಐಪಿಎಲ್ನಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಹಿನ್ನೆಲೆ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಅವರನ್ನು ಬಿಸಿಸಿಐ T20 ನಾಯಕತ್ವದಿಂದ ಕೆಳಗಿಳಿಸಿದೆ ಎಂದು ವರದಿಗಳು ತಿಳಿಸಿವೆ.

ಮೂಲಗಳ ಪ್ರಕಾರ, ಮುಂದಿನ ವಿಶ್ವಕಪ್ ವೇಳೆಗೆ ಬಲಿಷ್ಠ ತಂಡ ಕಟ್ಟುವ ಆಲೋಚನೆಯಲ್ಲಿರುವ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯು ಸೂರ್ಯಕುಮಾರ್ ಅವರನ್ನ ಕ್ಯಾಪ್ಟನ್ಸಿಯಿಂದ ಹೊರಗಿಸಲು ನಿರ್ಧರಿಸಿದೆ.
2028 ರ ಟಿ20 ವಿಶ್ವಕಪ್ ಹಾಗೂ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ () ಇಬ್ಬರು ಹೊಸ ಯುವ ನಾಯಕನನ್ನ ನೇಮಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
2024 ರ ನಂತರ ರೋಹಿತ್ ಶರ್ಮಾ ಟಿ20 ಕ್ರಿಕೆಟ್ಗೆ ಗುಡ್ಬೈ ಹೇಳಿದ ಬಳಿಕ ಸೂರ್ಯಕುಮಾರ್ ಯಾದವ್ ಅವರನ್ನ ಟಿ20 ಕ್ರಿಕೆಟ್ಗೆ ನಾಯಕನನ್ನಾಗಿ ನೇಮಿಸಲಾಯಿತು. ಆ ಸಮಯದಲ್ಲಿ, ಅವರು ವಿಶ್ವದ ಪ್ರಮುಖ ಟಿ20ಐ ಬ್ಯಾಟ್ಸ್ಮನ್ ಆಗಿದ್ದರು. ಐಸಿಸಿ ಶ್ರೇಯಾಂಕದಲ್ಲಿ ನಂ. 1 ಸ್ಥಾನದಲ್ಲಿದ್ದರು.
ಸೂರ್ಯಕುಮಾರ್ ನಾಯಕತ್ವದಲ್ಲಿ ಟೀಂ ಇಂಡಿಯಾ ಅತಿಹೆಚ್ಚು ಸರಣಿಗಳ ಗೆಲುವು ಸಾಧಿಸಿತ್ತು. ಸತತ 2 ದ್ವಿಪಕ್ಷೀಯ ಸರಣಿಗಳನ್ನ ಗೆದ್ದುಕೊಂಡಿದ್ದಲ್ಲದೇ, 2025 ರ ಏಷ್ಯಾಕಪ್, 2026 ರ ಟಿ 20 ವಿಶ್ವಕಪ್ನಲ್ಲಿ ಐತಿಹಾಸಿಕ ಪ್ರಶಸ್ತಿಯನ್ನು ಬಾಚಿಕೊಂಡಿತು.
ಫೆಬ್ರವರಿ-ಮಾರ್ಚ್ನಲ್ಲಿ ಭಾರತವನ್ನು ಸತತ ಎರಡನೇ ಬಾರಿ ಟ್ವೆಂಟಿ-20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದ್ದರೂ, ಸೂರ್ಯಕುಮಾರ್ ವೈಯಕ್ತಿಕವಾಗಿ 9 ಪಂದ್ಯಗಳಲ್ಲಿ 30.25ರ ಸರಾಸರಿಯಲ್ಲಿ 242 ರನ್ ಗಳಿಸಿದ್ದರು. 2025 ರ ಆರಂಭದಲ್ಲಿ ಸೂರ್ಯ 25 ಪಂದ್ಯಗಳಲ್ಲಿ ಕೇವಲ 12.84 ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದರು. 2026 ರ ಐಪಿಎಲ್ನಲ್ಲಿ ಕೇವಲ 270 ರನ್ಗಳನ್ನಷ್ಟೇ ಗಳಿಸಿದರು. . ಅವರು ಪ್ರತಿನಿಧಿಸಿದ್ದ ಮುಂಬೈ ಇಂಡಿಯನ್ಸ್ ತಂಡ ಲೀಗ್ ಹಂತದಲ್ಲೇ ಹೊರಬಿದ್ದಿತ್ತು.
ಭಾರತ ತಂಡವು ಈ ತಿಂಗಳಾಂತ್ಯದಲ್ಲಿ ಬೆಲ್ಫಾಸ್ಟ್ನಲ್ಲಿ ಐರ್ಲೆಂಡ್ ವಿರುದ್ಧ ಎರಡು T20I ಪಂದ್ಯಗಳನ್ನು ಆಡಲಿದ್ದು, ಮೊದಲ ಪಂದ್ಯ ಜೂನ್ 26 ರಂದು ಹಾಗೂ 2ನೇ ಪಂದ್ಯ ಜೂ.28ರಂದು ನಡೆಯಲಿದೆ. ಈ ತಂಡದಿಂದ ಸೂರ್ಯ ಅವರನ್ನ ಹೊರಗಿಡುವ ಸಾಧ್ಯತೆಯಿದೆ.