ರಾಂಚಿ, ಮೇ. 30 (DaijiworldNews/AA): ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಸ್ಫೋಟಕ ಬ್ಯಾಟಿಂಗ್ ನಡೆಸಿದ ವೈಭವ್ ಸೂರ್ಯವಂಶಿ ಜಾರ್ಖಂಡ್ ಆರೋಗ್ಯ ಇಲಾಖೆಯ ಬ್ರ್ಯಾಂಡ್ ರಾಯಭಾರಿಯಾಗಲಿದ್ದಾರೆ.

ಸೂರ್ಯವಂಶಿಗೆ ಬ್ರಾಂಡ್ ಅಂಬಾಸಿಡರ್ ಆಫರ್ ಅನ್ನು ಘೋಷಿಸಿ ಶನಿವಾರ ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಆರೋಗ್ಯ ಸಚಿವ ಡಾ. ಇರ್ಫಾನ್ ಅನ್ಸಾರಿ ಅವರು, "ಯುವ ಕ್ರಿಕೆಟಿಗನ ಅತ್ಯುತ್ತಮ ಪ್ರದರ್ಶನ ಮತ್ತು ಸ್ಪೂರ್ತಿದಾಯಕ ಸಾಧನೆಯನ್ನು ಶ್ಲಾಘಿಸಿದರು. ವೈಭವ್ ಸೂರ್ಯವಂಶಿ ರಾಜ್ಯದಾದ್ಯಂತದ ಮಹತ್ವಾಕಾಂಕ್ಷಿ ಯುವಕರಿಗೆ ಮಾದರಿ" ಎಂದು ತಿಳಿಸಿದ್ದಾರೆ.
"ತನ್ನ ಸ್ಫೋಟಕ ಬ್ಯಾಟಿಂಗ್, ಗಮನಾರ್ಹ ಪ್ರತಿಭೆ ಮತ್ತು ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಡೀ ರಾಷ್ಟ್ರವನ್ನು ಆಕರ್ಷಿಸುವ ಸಾಮರ್ಥ್ಯದಿಂದ ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿದ ಯುವ ಕ್ರಿಕೆಟ್ ತಾರೆ ವೈಭವ್ ಸೂರ್ಯವಂಶಿಗೆ ಜಾರ್ಖಂಡ್ನಲ್ಲಿ ಗೌರವಿಸಲಾಗುವುದು. ಹೆಚ್ಚುವರಿಯಾಗಿ, ವೈಭವ್ ಸೂರ್ಯವಂಶಿಯನ್ನು ಜಾರ್ಖಂಡ್ ಆರೋಗ್ಯ ಇಲಾಖೆಯ ಬ್ರ್ಯಾಂಡ್ ರಾಯಭಾರಿಯಾಗಿ ನೇಮಿಸಲಾಗುವುದು" ಎಂದು ಪೋಸ್ಟ್ ಮಾಡಿದ್ದಾರೆ.
"ವೈಭವ್, ನಿಮ್ಮ ತಂಡ, ಕ್ವಾಲಿಫೈಯರ್-2 ಪಂದ್ಯದಲ್ಲಿ ಸೋತಿದ್ದರೂ, ನೀವು ಈಗಾಗಲೇ ಲಕ್ಷಾಂತರ ಭಾರತೀಯರ ಹೃದಯಗಳನ್ನು ಗೆದ್ದಿದ್ದೀರಿ. ನಾನು ಸ್ವತಃ ಕ್ರಿಕೆಟಿಗ, ಆದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅಂತರರಾಷ್ಟ್ರೀಯ ಮಟ್ಟದ ದೊಡ್ಡ ಬೌಲರ್ಗಳನ್ನು ಅಂತಹ ಆತ್ಮವಿಶ್ವಾಸ ಮತ್ತು ಆಕ್ರಮಣಶೀಲತೆಯಿಂದ ಎದುರಿಸುವುದು ಮತ್ತು ಅವರನ್ನು ನಿರಂತರವಾಗಿ ಸೋಲಿಸುವುದು ಅಸಾಧಾರಣ ಪ್ರತಿಭೆಗೆ ಸಾಕ್ಷಿಯಾಗಿದೆ. ನೀವು ನಿಮ್ಮ ಸ್ವಂತ ಹೆಸರನ್ನು ಬೆಳಗಿಸಿದ್ದಲ್ಲದೆ, ನಿಮ್ಮ ಪೋಷಕರು, ಬಿಹಾರ ಮತ್ತು ಇಡೀ ಹಿಂದೂಸ್ತಾನ್ಗೆ ಕೀರ್ತಿ ತಂದಿದ್ದೀರಿ" ಎಂದಿದ್ದಾರೆ.