ಬೆಂಗಳೂರು, ಮೇ. 27 (DaijiworldNews/AA): ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರ್ಸಿಬಿ 92 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ವಿಶ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಅವರ ಪೋಸ್ಟ್ ಭಾರೀ ವೈರಲ್ ಆಗಿದೆ.

ಆರ್ಸಿಬಿಯ ಭರ್ಜರಿ ಗೆಲುವಿಗೆ ಸಂತಸ ವ್ಯಕ್ತಪಡಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ವಿಜಯ್ ಮಲ್ಯ, "ನಮ್ಮ ದೊಡ್ಡ ಸಿಂಹಗಳಿಗೆ ಅಭಿನಂದನೆಗಳು ಎಂದು ಕನ್ನಡದಲ್ಲೆ ಬರೆದುಕೊಂಡಿರುವುದು ವಿಶೇಷ. ಧರ್ಮಶಾಲಾದಲ್ಲಿ ಅದ್ಭುತ ಗೆಲುವು ಸಾಧಿಸಿದ್ದೀರಿ. ಬೆಂಗಳೂರಿನ ಸಿಂಹಗಳಂತೆ ಘರ್ಜಿಸಿ ಐಪಿಎಲ್ ಫೈನಲ್ಗೆ ಪ್ರವೇಶಿಸಿದ್ದೀರಿ" ಎಂದು ತಂಡಕ್ಕೆ ಶುಭಾಶಯ ಕೋರಿದ್ದಾರೆ.
ಕ್ವಾಲಿಫೈಯರ್-1 ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 5 ವಿಕೆಟ್ ನಷ್ಟಕ್ಕೆ 254 ರನ್ ಕಲೆಹಾಕಿತು. ಈ ಬೃಹತ್ ಗುರಿ ಬೆನ್ನತ್ತಿದ್ದ ಗುಜರಾತ್ 19.3 ಓವರ್ಗಳಲ್ಲಿ ಎಲ್ಲಾ ವಿಕೆಟ್ ನಷ್ಟಕ್ಕೆ ಕೇವಲ 162 ರನ್ ಗಳಿಸಲು ಶಕ್ತವಾಯಿತು.
ಬ್ಯಾಟಿಂಗ್ನಲ್ಲಿ ಆರ್ಸಿಬಿಯ ನಾಯಕ ರಜತ್ ಪಾಟಿದರ್, ವಿರಾಟ್ ಕೊಹ್ಲಿ, ಕೃನಾಲ್ ಪಾಂಡ್ಯ ಹಾಗೂ ದೇವದತ್ ಪಡಿಕ್ಕಲ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಇನ್ನು ಬೌಲಿಂಗ್ ನಲ್ಲಿ ಜಾಕೋಬ್ ಡಫಿ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ವುಡ್, ಕೃನಾಲ್ ಪಾಂಡ್ಯ ಹಾಗೂ ರಸಿಖ್ ಸಲಾಂ ಗುಜರಾತ್ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.