ಧರ್ಮಶಾಲಾ, ಮೇ. 27 (DaijiworldNews/AA): ಕ್ವಾಲಿಫೈಯರ್ 1 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹೀನಾಯವಾಗಿ ಸೋತ ಗುಜರಾತ್ ಟೈಟಾನ್ಸ್ ಆಟಗಾರ ಗ್ಲೆನ್ ಫಿಲಿಪ್ಸ್ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ.

ಆಡಿದ 11 ಸದಸ್ಯರ ಬಳಗದಲ್ಲಿ ಫಿಲಿಪ್ಸ್ ಇಲ್ಲದಿದ್ದರೂ ಜಿಟಿ ಗ್ಲೇನ್ ಫಿಲಿಪ್ಸ್ ಅವರನ್ನು ಸುದ್ದಿಗೋಷ್ಠಿಗೆ ಕಳುಹಿಸಿತ್ತು. ಈ ವೇಳೆ ಪತ್ರಕರ್ತರೊಬ್ಬರು, ಆರ್ಸಿಬಿ ನೀಡಿದ್ದ 255 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟುವಾಗ ಗುಜರಾತ್ ಟೈಟಾನ್ಸ್ ತಂಡ ಮಾನಸಿಕವಾಗಿ ಮೊದಲೇ ಸೋಲನ್ನು ಒಪ್ಪಿಕೊಂಡಿತ್ತೇ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ಫಿಲಿಪ್ಸ್, ಅದು ತೀರಾ ಮೂರ್ಖತನದ ಪ್ರಶ್ನೆ ಎಂದು ಸಿಟ್ಟಿನಿಂದ ಉತ್ತರಿಸಿದ್ದಾರೆ.
"ಮೈದಾನಕ್ಕಿಳಿಯುವ ಯಾವುದೇ ತಂಡವೂ ಮೊದಲೇ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. 250 ರನ್ಗಳ ಗುರಿಯನ್ನು ಬೆನ್ನಟ್ಟುವಾಗ ಸ್ಕೋರ್ಬೋರ್ಡ್ ಒತ್ತಡ ವಿಪರೀತವಾಗಿರುತ್ತದೆ. ಪಂಜಾಬ್ ಕಿಂಗ್ಸ್ನಂತಹ ಕೆಲವೇ ತಂಡಗಳು ಇದನ್ನು ಈ ಹಿಂದೆ ಚೇಸಿಂಗ್ ಮಾಡಿ ತೋರಿಸಿವೆ. ಆದರೆ ಅದು ಕಾಣುವಷ್ಟು ಸುಲಭವಲ್ಲ" ಎಂದು ಹೇಳಿದ್ದಾರೆ.
"ನಾವು ಈವರೆಗೆ ಸಾಕಷ್ಟು ಉತ್ತಮ ಕ್ರಿಕೆಟ್ ಆಡಿದ್ದೇವೆ. ಅದು ನಿಮಗೆ ತಿಳಿದಿದೆ. ಮುಂದಿನ ಪಂದ್ಯಕ್ಕೆ ತಂಡ ಸಿದ್ದವಾಗಲು ಏನು ಮಾಡಬೇಕೋ ಅದನ್ನು ಮಾಡಲಿದೆ" ಎಂದರು.
"ರಜತ್ ಪಾಟೀದಾರ್ ಒಬ್ಬ ಅದ್ಭುತ ಮತ್ತು ಯಾವುದೇ ಭಯವಿಲ್ಲದೆ ಆಡುವ ಬ್ಯಾಟರ್. ಪಂದ್ಯದ ಪರಿಸ್ಥಿತಿ ಏನೇ ಇದ್ದರೂ ಅವರು ತಮ್ಮ ನೈಸರ್ಗಿಕ ಆಕ್ರಮಣಕಾರಿ ಶೈಲಿಗೆ ಬದ್ಧರಾಗಿರುತ್ತಾರೆ ಮತ್ತು ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ" ಎಂದು ಆರ್ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಆಟದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.