ಧರ್ಮಶಾಲಾ, ಮೇ. 26 (DaijiworldNews/AA): 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ 70 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಇದೀಗ ತಂಡಗಳು ಪ್ಲೇ ಆಫ್ ಪಂದ್ಯಗಳನ್ನು ಆಡಲಿವೆ. ಇಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮಾಜಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿದೆ.

ಧರ್ಮಶಾಲಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ಗೆ ಎಂಟ್ರಿ ಕೊಡಲಿದೆ. ಸಂಜೆ 7:00 ಗಂಟೆಗೆ ಟಾಸ್, 7:30ಕ್ಕೆ ಪಂದ್ಯ ಪ್ರಾರಂಭವಾಗಲಿದೆ. ಬ್ಯಾಟಿಂಗ್ ಗೆ ಅನುಕೂಲಕರವಾದ ಧರ್ಮಶಾಲಾ ಪಿಚ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳೇ ಹೆಚ್ಚುಬಾರಿ ಗೆದ್ದಿದೆ. ಆದರೆ ಈ ಬಾರಿ ಧರ್ಮಶಾಲಾದಲ್ಲಿ ಚೇಸಿಂಗ್ ಮಾಡುವವರಿಗೆ ಹೆಚ್ಚು ಅನುಕೂಲ ಎಂದು ಹೇಳಲಾಗುತ್ತಿದೆ. ಇನ್ನೂ ಕಳೆದ 8 ವರ್ಷಗಳಲ್ಲಿ ಕ್ವಾಲಿಫೈಯರ್-1 ನಲ್ಲಿ ಗೆದ್ದವರೇ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಆದ್ದರಿಂದ ಇಂದು ಗೆದ್ದ ತಂಡವೇ ಚಾಂಪಿಯನ್ ಆಗಿ ಹೊರಹೊಮ್ಮುವ ಸಾಧ್ಯತೆಯಿದೆ.
ಆರ್ಸಿಬಿಗೆ ಫಿಲ್ ಸಾಲ್ಟ್ ಕಮ್ಬ್ಯಾಕ್?
ಕ್ವಾಲಿಫೈಯರ್-1 ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಸಿಬಿ ನಾಯಕ ರಜತ್ ಪಾಟೀದಾರ್, ಆರ್ಸಿಬಿ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಗಾಯದಿಂದ ಚೇತರಿಸಿಕೊಂಡಿದ್ದು, ನೆಟ್ಸ್ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಸಾಲ್ಟ್ ಕಮ್ಬ್ಯಾಕ್ ಮಾಡಿದರೆ ಬೆಂಗಳೂರು ತಂಡ ತನ್ನ ನೆಚ್ಚಿನ ಬ್ಯಾಟಿಂಗ್ ಕ್ರಮಾಂಕದೊಂದಿಗೆ ನೇರವಾಗಿ ಫೈನಲ್ ತಲುಪಲು ರಣತಂತ್ರ ರೂಪಿಸಬಹುದು. ಫಿಲ್ ಸಾಲ್ಟ್ ಅವರು ಪ್ಲೇಯಿಂಗ್-11ನಲ್ಲಿ ಆಡುತ್ತಾರೋ? ಇಲ್ಲವೋ? ಎನ್ನುವ ಬಗ್ಗೆ ಮ್ಯಾನೇಜ್ಮೆಂಟ್ ಕೊನೆಯ ಕ್ಷಣದಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ" ಎಂದು ಸ್ಪಷ್ಟನೆ ನೀಡಿದ್ದಾರೆ.