ಬೆಂಗಳೂರು, ಮೇ. 25 (DaijiworldNews/AA): ಕ್ರೀಡೆಯಲ್ಲಿ ಭಾವನೆ ಮತ್ತು ಉದ್ವೇಗ ಇರುವುದು ಸಹಜ. ಆದರೆ ಆಟದ ಹಿಂದೆ ನಿಜವಾದ ಮನುಷ್ಯರು ಮತ್ತು ಅವರ ಕುಟುಂಬಗಳು ಇರುತ್ತವೆ ಎಂಬುದನ್ನು ಮರೆಯಬಾರದು ಎಂದು ಆಸ್ಟ್ರೇಲಿಯಾದ ಕ್ರಿಕೆಟರ್ ಟ್ರಾವಿಸ್ ಹೆಡ್ ಅವರ ಪತ್ನಿ ಜೆಸ್ಸಿಕಾ ಹೆಡ್ ಬೇಸರ ವ್ಯಕ್ತಪಡಿಸಿದ್ದಾರೆ.

ಆಸ್ಟ್ರೇಲಿಯಾದ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಅವರು, "ವಿಶ್ವಕಪ್ ಮುಗಿದ ನಂತರ ನಡೆದ ದೌರ್ಜನ್ಯ ಮತ್ತೊಮ್ಮೆ ಮರುಕಳಿಸಿದಂತೆ ಭಾಸವಾಗುತ್ತಿದೆ. ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ನನ್ನ ಸೋಶಿಯಲ್ ಮೀಡಿಯಾ ಖಾತೆಗಳು ತುಂಬಿಹೋಗಿವೆ. ನನ್ನ ಸ್ನೇಹಿತರು ಮತ್ತು ಕುಟುಂಬದವರನ್ನು ಗುರಿಯಾಗಿಸಿ ದಾಳಿ ಮಾಡಲಾಗುತ್ತಿದೆ. ಈ ಘಟನೆಯಾದರೂ ಜನರ ಮನಸ್ಸಿನಲ್ಲಿ ಪರಸ್ಪರರ ಬಗ್ಗೆ ಸ್ವಲ್ಪ ದಯೆ ಮತ್ತು ಗೌರವವನ್ನು ಮೂಡಿಸಲಿ ಎಂದು ನಾನು ಭಾವಿಸುತ್ತೇನೆ" ಎಂದು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ
ಐಪಿಎಲ್ 2026ರ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ವೇಳೆ ಟ್ರಾವಿಸ್ ಹೆಡ್ ಮತ್ತು ವಿರಾಟ್ ಕೊಹ್ಲಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಪಂದ್ಯ ಮುಗಿದ ಬಳಿಕ ಟ್ರಾವಿಸ್ ಹೆಡ್ ಗೆ ಕೊಹ್ಲಿ ಹಸ್ತಲಾಘವ ಮಾಡಲು ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಆದರೆ, ಪಂದ್ಯ ಮುಗಿದರೂ ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದು, ಹೊಸ ರೂಪ ಪಡೆದುಕೊಂಡಿದೆ. ಕೆಲ ಅಭಿಮಾನಿಗಳು ಟ್ರಾವಿಸ್ ಹೆಡ್ ಮಾತ್ರವಲ್ಲದೆ ಅವರ ಪತ್ನಿ ಜೆಸ್ಸಿಕಾ, ಅವರ ಸ್ನೇಹಿತರು ಮತ್ತು ಕುಟುಂಬದವರ ಖಾತೆಗಳ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಿದ್ದಾರೆ.