ನವದೆಹಲಿ, ಮೇ. 10 (DaijiworldNews/TA): ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಬಹುದಿನಗಳ ಕಾಯುವಿಕೆಗೆ ತೆರೆ ಬಿದ್ದಿದೆ. ಗಾಯದ ಸಮಸ್ಯೆಯಿಂದ ಇಂಗ್ಲೆಂಡ್ಗೆ ತೆರಳಿದ್ದ ತಂಡದ ಸ್ಫೋಟಕ ಆರಂಭಿಕ ಆಟಗಾರ ಫಿಲ್ ಸಾಲ್ಟ್ ಇದೀಗ ಭಾರತಕ್ಕೆ ಮರಳಿದ್ದು, ಪ್ಲೇ-ಆಫ್ ಹಂತದ ಮುನ್ನ ಆರ್ಸಿಬಿ ತಂಡಕ್ಕೆ ಭಾರೀ ಬಲ ತುಂಬಿದ್ದಾರೆ.

ಏಪ್ರಿಲ್ 18ರಂದು ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಫಿಲ್ ಸಾಲ್ಟ್ ಅವರ ಎಡಗೈ ಬೆರಳಿಗೆ ಗಾಯವಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆ ಮತ್ತು ತಪಾಸಣೆಗಾಗಿ ಅವರು ಇಂಗ್ಲೆಂಡ್ಗೆ ತೆರಳಿದ್ದರು. ಅವರ ಅನುಪಸ್ಥಿತಿಯಲ್ಲಿ ಯುವ ಆಟಗಾರ ಜಾಕೋಬ್ ಬೆಥೆಲ್ ಆರಂಭಿಕರಾಗಿ ಅವಕಾಶ ಪಡೆದಿದ್ದರು.
ಆರ್ಸಿಬಿ ಮೂಲಗಳ ಪ್ರಕಾರ, ಫಿಲ್ ಸಾಲ್ಟ್ ಇಂದು ಮುಂಜಾನೆ ಅಹಮದಾಬಾದ್ಗೆ ಬಂದಿಳಿದಿದ್ದಾರೆ. ಅಲ್ಲಿಂದ ಅವರು ರಾಯ್ಪುರಕ್ಕೆ ತೆರಳಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಪ್ಲೇ-ಆಫ್ ರೇಸ್ ತೀವ್ರಗೊಂಡಿರುವ ಈ ಸಂದರ್ಭದಲ್ಲಿ ಸಾಲ್ಟ್ ಮರಳಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಗಾಯದ ಕಾರಣ ಕಳೆದ ಒಂದು ವಾರದಿಂದ ಮೈದಾನದಿಂದ ದೂರವಿದ್ದ ಫಿಲ್ ಸಾಲ್ಟ್, ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ.
ಆದರೆ ಮೇ 13ರಂದು ನಡೆಯಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಮತ್ತೆ ಮೈದಾನಕ್ಕಿಳಿಯುವ ಸಾಧ್ಯತೆ ಇದೆ. ಸಾಲ್ಟ್ ತಂಡಕ್ಕೆ ಮರಳಿದರೆ, ಜೇಕಬ್ ಬೆಥೆಲ್ ಆಡುವ ಬಳಗದಿಂದ ಹೊರಗುಳಿಯುವ ಸಾಧ್ಯತೆ ಇದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೋಶ್ ಹೇಝಲ್ವುಡ್, ಭುವನೇಶ್ವರ್ ಕುಮಾರ್ ಸೇರಿದಂತೆ ಹಲವು ಪ್ರಮುಖ ಆಟಗಾರರು ಇದ್ದಾರೆ.