ಲಕ್ನೋ, ಏ. 27 (DaijiworldNews/AA): ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಅಂಗ್ಕ್ರಿಶ್ ರಘುವಂಶಿ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ. 20 ರಷ್ಟು ದಂಡ ವಿಧಿಸಲಾಗಿದೆ. ಜೊತೆಗೆ ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ.

ಏಪ್ರಿಲ್ 26 ರಂದು ಲಕ್ನೋನ ಏಕನಾ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಬ್ಯಾಟರ್ ಅಂಗ್ಕ್ರಿಶ್ ರಘುವಂಶಿ ಅವರು ಫೀಲ್ಡಿಂಗ್ಗೆ ಅಡ್ಡಿಪಡಿಸಿದ ಕಾರಣಕ್ಕಾಗಿ ಔಟ್ ಎಂದು ಘೋಷಿಸಲಾಯಿತು. ಅಂಪೈರ್ ತೀರ್ಪಿನಿಂದ ತೀವ್ರ ಅಸಮಾಧಾನಗೊಂಡ ರಘುವಂಶಿ, ಮೈದಾನದಿಂದ ಹೊರಕ್ಕೆ ಹೋಗುವಾಗ ಬೌಂಡರಿ ಲೈನ್ನಲ್ಲಿದ್ದ ಕುಶನ್ಗಳನ್ನು ಬ್ಯಾಟ್ನಿಂದ ಜೋರಾಗಿ ಹೊಡೆದರು. ಅಷ್ಟೇ ಅಲ್ಲದೆ, ಡಗೌಟ್ ತಲುಪಿದ ನಂತರ ಸಿಟ್ಟಿನಿಂದ ತಮ್ಮ ಹೆಲ್ಮೆಟ್ ಅನ್ನು ಎಸೆದಿದ್ದರು.
ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ (ಕ್ರಿಕೆಟ್ ಉಪಕರಣಗಳು ಅಥವಾ ಮೈದಾನದ ವಸ್ತುಗಳ ದುರ್ಬಳಕೆ) ರಘುವಂಶಿ ಅವರ ಈ ವರ್ತನೆಯನ್ನು 'ಲೆವೆಲ್ 1' ಅಪರಾಧ ಎಂದು ಪರಿಗಣಿಸಿ ದಂಡ ವಿಧಿಸಲಾಗಿದೆ. ರಘುವಂಶಿ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ವಿಧಿಸಿದ ಶಿಕ್ಷೆಯನ್ನು ಅಂಗೀಕರಿಸಿದ್ದಾರೆ.
ಅಂಗ್ಕ್ರಿಶ್ ರಘುವಂಶಿ ಅವರಿಗೆ ಕೆಕೆಆರ್ 3 ಕೋಟಿ ರೂ. ಸಂಭಾವನೆ ನೀಡುತ್ತಿದೆ. ಅದರಂತೆ ಲೀಗ್ ಹಂತದ ಪ್ರತಿ ಪಂದ್ಯಕ್ಕೆ 21,42857 ರೂ. ಶುಲ್ಕ ಅವರು ಪಡೆಯುತ್ತಿದ್ದಾರೆ. ಈ ಪಂದ್ಯ ಶುಲ್ಕದ ಶೇ.20 ರಷ್ಟು ದಂಡ ತೆರಬೇಕಾಗುತ್ತದೆ. ಅದರಂತೆ ಅಂಗ್ಕ್ರಿಶ್ ರಘುವಂಶಿ 4.28 ಲಕ್ಷ ರೂ. ದಂಡ ಪಾವತಿಸಬೇಕು.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ವೇಳೆ ೫ನೇ ಓವರ್ನಲ್ಲಿ ರನ್ ಓಡುವಾಗ ರಘುವಂಶಿ ಅವರು ತಮ್ಮ ದಿಕ್ಕನ್ನು ಬದಲಿಸಿ ಫೀಲ್ಡರ್ ಎಸೆದ ಚೆಂಡಿಗೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಲಕ್ನೋ ತಂಡ ಅಪೀಲ್ ಮಾಡಿತ್ತು. ಮೂರನೇ ಅಂಪೈರ್ ಇದನ್ನು ಪರಿಶೀಲಿಸಿ 'ಔಟ್' ಎಂದು ತೀರ್ಪು ನೀಡಿದ್ದರು.
ರಘುವಂಶಿ ಐಪಿಎಲ್ ಇತಿಹಾಸದಲ್ಲಿ 'ಫೀಲ್ಡಿಂಗ್ಗೆ ಅಡ್ಡಿಪಡಿಸಿದ' ಕಾರಣಕ್ಕೆ ಔಟ್ ಆದ ನಾಲ್ಕನೇ ಆಟಗಾರ ಎಂದೆನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಯೂಸುಫ್ ಪಠಾಣ್, ಅಮಿತ್ ಮಿಶ್ರಾ, ರವೀಂದ್ರ ಜಡೇಜಾ ಅವರು 'ಫೀಲ್ಡಿಂಗ್ಗೆ ಅಡ್ಡಿಪಡಿಸಿದ' ಕಾರಣಕ್ಕೆ ಔಟ್ ಆಗಿದ್ದರು.