ಬೆಂಗಳೂರು, ಏ. 27 (DaijiworldNews/AA): ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಪ್ರಿಲ್ 24 ರಂದು ರಾಯಲ್ ಚಾಲೆಂಜರ್ಸ್(ಆರ್ಸಿಬಿ) ಮತ್ತು ಗುಜರಾತ್ ಟೈಟಾನ್ಸ್(ಜಿಟಿ) ತಂಡಗಳ ನಡುವೆ ನಡೆದ ಐಪಿಎಲ್ ಪಂದ್ಯದ ವೇಳೆ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಕೇಬಲ್ಗಳನ್ನು ಕತ್ತರಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪಂದ್ಯ ನಡೆಯುವ ದಿನದಂದು ಬೆಳಿಗ್ಗೆ ಕ್ರೀಡಾಂಗಣದ ತಾಂತ್ರಿಕ ತಂಡವು ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಬರೋಬ್ಬರಿ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು ಆಫ್ಲೈನ್ ಆಗಿರುವುದು ಪತ್ತೆಯಾಗಿದೆ. ಕ್ಯಾಮೆರಾಗಳು ಏಕಾಏಕಿ ಬಂದ್ ಆಗಿದ್ದರಿಂದ ತಾಂತ್ರಿಕ ತಂಡವು ತಕ್ಷಣವೇ ಕೂಲಂಕಷವಾಗಿ ತನಿಖೆ ನಡೆಸಿದೆ. ಈ ವೇಳೆ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಇ. ಮತ್ತು ಅಬ್ದುಲ್ ಕಲಾಂ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.
ಈ ಇಬ್ಬರು ಆರೋಪಿಗಳು ಕ್ರೀಡಾಂಗಣವನ್ನು ಪ್ರವೇಶಿಸಲು ಅಗತ್ಯವಾದ ಮಾನ್ಯ ಪಾಸ್ಗಳನ್ನು ಹೊಂದಿರಲಿಲ್ಲ. ಆದರೂ ಇಬ್ಬರು ಬೆಳಿಗ್ಗೆ 11:30ರ ಸುಮಾರಿಗೆ ನಿಷ್ಕ್ರಿಯಗೊಂಡ ಹಳೆಯ ಕಾರ್ಡ್ ಬಳಸಿಕೊಂಡು ಕ್ರೀಡಾಂಗಣವನ್ನು ಅನಧಿಕೃತವಾಗಿ ಪ್ರವೇಶಿಸಿದ್ದರು ಎಂದು ತಿಳಿದುಬಂದಿದೆ.
ಕ್ರೀಡಾಂಗಣವನ್ನು ಪ್ರವೇಶಿಸಿದ ಆರೋಪಿಗಳು, ಎನ್ವಿಆರ್ ಮತ್ತು ಆಪ್ಟಿಕಲ್ ಫೈಬರ್ ಸಂಪರ್ಕಗಳನ್ನು ಉದ್ದೇಶಪೂರ್ವಕವಾಗಿ ತಪ್ಪು ತಪ್ಪಾಗಿ ನಿರ್ವಹಿಸಿ ಅವುಗಳನ್ನು ಕತ್ತರಿಸಿದ್ದಾರೆ. ಹೀಗಾಗಿ ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಂಡಿದೆ. ಈ ಹಿಂದೆ ಭದ್ರತೆಗಾಗಿ ಮಾಡಲಾಗಿದ್ದ ಎಲ್ಲಾ ಪ್ರಮುಖ ಆರಂಭಿಕ ತಾಂತ್ರಿಕ ಕೆಲಸಗಳನ್ನು ಇವರು ಹಾನಿಗೊಳಿಸಿದ್ದಾರೆ. ಆರೋಪಿಗಳು ಸರಿಯಾದ ಅನುಮತಿ ಇಲ್ಲದೆಯೇ ಕ್ರೀಡಾಂಗಣದ ಅತ್ಯಂತ ಸೂಕ್ಷ್ಮ ಪ್ರದೇಶವಾದ ಸಿಸಿಟಿವಿ ನಿಯಂತ್ರಣ ಕೊಠಡಿಯನ್ನು ಪ್ರವೇಶಿಸಿರುವುದು ಮತ್ತು ನಂತರ ಪಾರ್ಕಿಂಗ್ ಪ್ರದೇಶದ ಬಳಿ ಇರುವ ಕನೆಕ್ಷನ್ ಬಾಕ್ಸ್ ಕಡೆಗೆ ಚಲಿಸುತ್ತಿರುವ ದೃಶ್ಯಗಳು ಲಭ್ಯವಾಗಿದೆ.
ಆರೋಪಿಗಳು ಎಸಗಿದ ವಿಧ್ವಂಸಕ ಕೃತ್ಯದಿಂದಾಗಿ ಕ್ರೀಡಾಂಗಣದ ಅತ್ಯಂತ ಪ್ರಮುಖ ಭದ್ರತಾ ಪ್ರದೇಶಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಸ್ಥಗಿತಗೊಂಡಿದ್ದವು. ಅವುಗಳಲ್ಲಿ ಪ್ರಮುಖವಾಗಿ ಎಲ್ಲಾ ಪ್ರವೇಶ ದ್ವಾರಗಳು, ಕ್ರೀಡಾಂಗಣದ ಸುತ್ತಮುತ್ತಲಿನ ಕ್ಯಾಮೆರಾಗಳು, ಕಾರ್ಪೊರೇಟ್ ಸ್ಟ್ಯಾಂಡ್ ಕ್ಯಾಮೆರಾ ಬಂದ್ ಆಗಿತ್ತು. ಈ ಪ್ರಮುಖ ಸ್ಥಳಗಳ ಕ್ಯಾಮೆರಾಗಳು ಬಂದ್ ಆಗಿದ್ದರಿಂದ ಪಂದ್ಯದ ವೇಳೆ ಭದ್ರತಾ ಮೇಲ್ವಿಚಾರಣೆ ನಡೆಸಲು ಪೊಲೀಸರಿಗೆ ಅಗತ್ಯವಾದ ದತ್ತಾಂಶ ಅಥವಾ ಫೀಡ್ಗಳನ್ನು ಒದಗಿಸಲು ದೂರುದಾರರಿಗೆ ಸಾಧ್ಯವಾಗಲಿಲ್ಲ.