ಬೆಂಗಳೂರು, ಏ. 26 (DaijiworldNews/AK): ಇಂಡಿಯನ್ ಪ್ರೀಮಿಯರ್ ಲೀಗ್ 2026 ರಲ್ಲಿ ಶನಿವಾರ ನಡೆದ ಎರಡೂ ಪಂದ್ಯವು ರೋಚಕವಾಗಿತ್ತು. ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಊಹಿಸಲೂ ಸಾಧ್ಯವಿಲ್ಲದ ಘಟನೆ ನಡೆಯಿತು.

ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಓಪನರ್ ವೈಭವ್ ಸೂರ್ಯವಂಶಿ ತಮ್ಮ ಬ್ಯಾಟಿಂಗ್ ಮೂಲಕ ಶತಕ ಗಳಿಸಿ, ಇಡೀ ಕ್ರಿಕೆಟ್ ಜಗತ್ತಿಗೇ ಶಾಕ್ ಕೊಟ್ಟರು. ಇದರ ಜೊತೆಗೆ ಇವರು ಮೈದಾನದಲ್ಲೇ ಕಣ್ಣೀರಿಟ್ಟ ಘಟನೆಯೂ ನಡೆಯಿತು.
ಶತಕ ಗಳಿಸಿದ ನಂತರ, ವೈಭವ್ ತನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ, ಅವರ ಕಣ್ಣುಗಳಲ್ಲಿ ಆನಂದದ ಕಣ್ಣೀರು ತುಂಬಿತು. ವೈಭವ್ ಅವರ ಭಾವನಾತ್ಮಕ ಆಚರಣೆಯು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಶತಕ ಸಿಡಿಸುತ್ತಿದ್ದಂತೆ ವೈಭವ್ ತಮ್ಮ ಟ್ರೇಡ್ಮಾರ್ಕ್ ಸೆಲ್ಯೂಟ್ ಮತ್ತು ಹಾರ್ಟ್ ಸಿಂಬಲ್ ತೋರಿಸಿ ಸಂಭ್ರಮಿಸಿದರು.
15 ನೇ ವಯಸ್ಸಿನಲ್ಲಿ ವಿಶ್ವದ ಅತಿದೊಡ್ಡ ವೇದಿಕೆಯಲ್ಲಿ ಅಂತಹ ದಾಖಲೆ ಸಾಧಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಶತಕ ಸಿಡಿಸಿದ ಕೂಡಲೇ ಇವರು ಖುಷಿಯಿಂದ ಕಣ್ಣೀರಿಟ್ಟರು.
ವೈಭವ್ ಕೇವಲ 15 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು, ಸತತ ನಾಲ್ಕು ಸಿಕ್ಸರ್ಗಳನ್ನು ಬಾರಿಸುವ ಮೂಲಕ ಕ್ರೀಡಾಂಗಣದಲ್ಲಿ ಸಂಚಲನ ಮೂಡಿಸಿದರು. ಆದರೆ ಶತಕ ಸಿಡಿಸಿ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಶಕೀಬ್ ಹುಸೇನ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಆಗಿ ಔಟಾದರು.