ಬೆಂಗಳೂರು, ಏ. 19 (DaijiworldNews/TA): ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಟಿಕೆಟ್ಗಳನ್ನು ಕಾಳಸಂತೆಯಲ್ಲಿ (ಬ್ಲಾಕ್ನಲ್ಲಿ) ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದ ದೊಡ್ಡ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಸದಸ್ಯನೊಬ್ಬ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಪ್ರಕರಣ ಮತ್ತಷ್ಟು ಗಂಭೀರತೆಯನ್ನು ಪಡೆದುಕೊಂಡಿದೆ.

ಪ್ರಕರಣದ ಹಿನ್ನೆಲೆ, ಟಿಕೆಟ್ ನಿರ್ವಹಣೆ ಹೊತ್ತಿರುವ DNA ಎಂಟರ್ಟೈನ್ಮೆಂಟ್ ನೆಟ್ವರ್ಕ್ ಸಂಸ್ಥೆಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಕೆಎಸ್ಸಿಎ ಸದಸ್ಯ ಗಣೇಶ್ ಹರಿಕೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ತನಿಖೆ ತೀವ್ರಗೊಂಡಿದೆ. ಐಪಿಎಲ್ ಟಿಕೆಟ್ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಚಂದ್ರಶೇಖರ್ ಎಂಬಾತನನ್ನು ಬಂಧಿಸಿದ ವೇಳೆ, ವಿಚಾರಣೆಯಲ್ಲಿ ಕೆಎಸ್ಸಿಎ ಸದಸ್ಯ ಹರಿಕೇಶ್ ಹೆಸರು ಹೊರಬಂದಿದೆ. ಚಂದ್ರಶೇಖರ್ ಚಿನ್ನಸ್ವಾಮಿ ಸ್ಟೇಡಿಯಂನ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಅವನ ಮೂಲಕವೇ ಟಿಕೆಟ್ಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಪ್ರಾಥಮಿಕ ತನಿಖೆಯಲ್ಲಿ ಗಣೇಶ್ ಹರಿಕೇಶ್ ‘ಸ್ವಸ್ತಿಕ್ ಹೆವಿ ಇಂಜಿನಿಯರಿಂಗ್ ಆ್ಯಂಡ್ ಇಂಡಸ್ಟ್ರಿಯಲ್ ಆಟೋಮೋಟಿವ್’ ಮತ್ತು ‘ಧರಣಿ ಕಂಪ್ಯೂಟರ್ಸ್’ ಎಂಬ ಖಾಸಗಿ ಕಂಪನಿಗಳ ಹೆಸರಿನಲ್ಲಿ ಆನ್ಲೈನ್ ಮೂಲಕ ದೊಡ್ಡ ಪ್ರಮಾಣದಲ್ಲಿ ಟಿಕೆಟ್ಗಳನ್ನು ಖರೀದಿಸಿದ್ದಾನೆ ಎನ್ನಲಾಗಿದೆ. ನಂತರ ಈ ಟಿಕೆಟ್ಗಳನ್ನು ಚಂದ್ರಶೇಖರ್ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು.
ಆರ್ಸಿಬಿ ಮೊದಲ ಪಂದ್ಯದಲ್ಲಿ 81 ಟಿಕೆಟ್ಗಳನ್ನು ಬ್ಲಾಕ್ನಲ್ಲಿ ಮಾರಾಟ ಮಾಡಿರುವುದು ಪತ್ತೆಯಾಗಿದ್ದು, ಮುಂದಿನ ಪಂದ್ಯಕ್ಕಾಗಿ 100 ಟಿಕೆಟ್ಗಳನ್ನು ಸಿದ್ಧಪಡಿಸಲಾಗಿತ್ತು. ಒಟ್ಟು ಸುಮಾರು 17 ಲಕ್ಷ ರೂಪಾಯಿ ಮೌಲ್ಯದ 181 ಟಿಕೆಟ್ಗಳನ್ನು ಖರೀದಿಸಲಾಗಿದ್ದು, ಕನಿಷ್ಠ 100 ಟಿಕೆಟ್ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಟಿಕೆಟ್ಗಳು ಆರೋಪಿಗಳ ಕೈಗೆ ಹೇಗೆ ತಲುಪಿದವು ಎಂಬುದನ್ನು ಪತ್ತೆಹಚ್ಚಲು ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ಸ್ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಸಂಬಂಧಿತ ಕಂಪನಿಗಳ ನಿರ್ವಹಣಾ ನಿರ್ದೇಶಕರ ಮೇಲೂ ಅನುಮಾನ ವ್ಯಕ್ತವಾಗಿದ್ದು, ಪ್ರಕರಣದ ಮೂಲವನ್ನು ಪತ್ತೆಹಚ್ಚಲು ಸಿಸಿಬಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.