ನವದೆಹಲಿ, ಏ. 18 (DaijiworldNews/AA): ಪಂದ್ಯದ ವೇಳೆ ಮೊಬೈಲ್ ಬಳಸಿ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದ ಆರ್ಆರ್ ಫ್ರಾಂಚೈಸಿ ವ್ಯವಸ್ಥಾಪಕ ರೋಮಿ ಭಿಂದರ್ಗೆ ಬಿಸಿಸಿಐ 1 ಲಕ್ಷ ದಂಡ ವಿಧಿಸಿ, ಎಚ್ಚರಿಕೆ ನೀಡಿದೆ.

ಏ.10ರಂದು ಗುವಾಹಟಿಯಲ್ಲಿ ಆರ್ಸಿಬಿ ಹಾಗೂ ಆರ್ಆರ್ ತಂಡದ ನಡುವೆ ನಡೆದ ಪಂದ್ಯದ ವೇಳೆ ರೋಮಿ ಮೊಬೈಲ್ ಬಳಸುತ್ತಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇದನ್ನು ಪರಿಗಣಿಸಿರುವ ಬಿಸಿಸಿಐ ಭ್ರಷ್ಟಾಚಾರ ವಿರೋಧಿ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿತ್ತು.
ಈ ಘಟನೆ ಬಗ್ಗೆ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಯು) ತನಿಖೆ ನಡೆಸಿತ್ತು. ಈ ವೇಳೆ ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳು ಇರುವ ಪ್ರದೇಶದಲ್ಲಿ ಮೊಬೈಲ್ ಬಳಸಬಾರದು ಎನ್ನುವ ನಿಯಮವನ್ನು ಬಿಂಧರ್ ಮುರಿದಿರುವುದು ಕಂಡುಬಂದಿದೆ. ಹೀಗಾಗಿ ಅವರಿಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ.