ಸ್ಪೇನ್, ಏ. 17 (DaijiworldNews/TA): ಅರ್ಜೆಂಟೀನಾದ ಸೂಪರ್ಸ್ಟಾರ್ ಲಿಯೋನೆಲ್ ಮೆಸ್ಸಿ ಈಗ ಫುಟ್ಬಾಲ್ ಕ್ಲಬ್ನ ಮಾಲೀಕತ್ವಕ್ಕೆ ಪ್ರವೇಶಿಸಿದ್ದು, ಸ್ಪ್ಯಾನಿಷ್ ಐದನೇ ಹಂತದ ತಂಡ ಯುಇ ಕಾರ್ನೆಲಾದ ಮಾಲೀಕತ್ವದ ಹೊಣೆ ಹೊತ್ತಿದ್ದಾರೆ ಎಂದು ಕ್ಲಬ್ ಅಧಿಕೃತವಾಗಿ ಘೋಷಿಸಿದೆ.

ಕ್ಯಾಟಲೋನಿಯಾ ಮೂಲದ ಈ ಕ್ಲಬ್, ಗುರುವಾರ ಪ್ರಕಟಿಸಿದ ಹೇಳಿಕೆಯಲ್ಲಿ ಈ ಮಾಲೀಕತ್ವವನ್ನು ದೃಢಪಡಿಸಿದ್ದು, ಲಿಯೋನೆಲ್ ಮೆಸ್ಸಿ ಅವರ ಕ್ಯಾಟಲೋನಿಯಾ ಪ್ರದೇಶದೊಂದಿಗಿನ ದೀರ್ಘಕಾಲದ ಸಂಬಂಧವನ್ನು ವಿಶೇಷವಾಗಿ ಉಲ್ಲೇಖಿಸಿದೆ.
ಎಂಟು ಬಾರಿ ಬಾಲನ್ ಡಿ’ಓರ್ ವಿಜೇತರಾದ ಲಿಯೋನೆಲ್ ಮೆಸ್ಸಿ ಪ್ರಸ್ತುತ ಅಮೆರಿಕದ ಕ್ಲಬ್ ಇಂಟರ್ ಮಿಯಾಮಿ CF ಪರ ಆಡುತ್ತಿದ್ದು, ಮುಂದಿನ ವಿಶ್ವಕಪ್ನಲ್ಲಿ ಅರ್ಜೆಂಟೀನಾ ತಂಡವನ್ನು ಮುನ್ನಡೆಸುವ ನಿರೀಕ್ಷೆಯಲ್ಲಿದ್ದಾರೆ. ಯುಇ ಕಾರ್ನೆಲಾ ತನ್ನ ಅಧಿಕೃತ ಹೇಳಿಕೆಯಲ್ಲಿ, ಮೆಸ್ಸಿಯ ಆಗಮನವು ಕ್ಲಬ್ನ ಕ್ರೀಡಾ ಹಾಗೂ ಆಡಳಿತಾತ್ಮಕ ಅಭಿವೃದ್ಧಿಗೆ ಹೊಸ ಅಧ್ಯಾಯವನ್ನು ಆರಂಭಿಸಲಿದೆ ಎಂದು ತಿಳಿಸಿದೆ. ಯುವ ಪ್ರತಿಭೆಗಳ ಅಭಿವೃದ್ಧಿ ಮತ್ತು ದೀರ್ಘಕಾಲೀನ ಯೋಜನೆಗಳಿಗೆ ಇದು ಬಲ ನೀಡಲಿದೆ ಎಂದು ಕ್ಲಬ್ ಅಭಿಪ್ರಾಯಪಟ್ಟಿದೆ.
ಕ್ಯಾಟಲೋನಿಯಾ ಜೊತೆಗಿನ ಸಂಬಂಧವನ್ನು ಮತ್ತೊಮ್ಮೆ ಬಲಪಡಿಸುವ ಈ ಹೂಡಿಕೆ, ಮೆಸ್ಸಿಯ ಭವಿಷ್ಯದ ಯೋಜನೆಗಳ ಭಾಗವಾಗಿಯೂ ಕಾಣಲಾಗುತ್ತಿದೆ. ಅವರು ತಮ್ಮ ವೃತ್ತಿಜೀವನದ ಬಹುಭಾಗವನ್ನು FC ಬಾರ್ಸಿಲೋನಾ ತಂಡದಲ್ಲಿ ಕಳೆದಿದ್ದರು. ಇದೇ ವೇಳೆ, ಫುಟ್ಬಾಲ್ ಲೋಕದಲ್ಲಿ ಮತ್ತೊಂದು ದೊಡ್ಡ ಬೆಳವಣಿಗೆಯಾಗಿ ಕ್ರಿಸ್ಟಿಯಾನೊ ರೊನಾಲ್ಡೊ ಅವರೂ ಇತ್ತೀಚೆಗೆ ಕ್ಲಬ್ ಮಾಲೀಕತ್ವದಲ್ಲಿ ಭಾಗಿಯಾಗಿರುವುದು ಈ ಹೊಸ ಟ್ರೆಂಡ್ಗೆ ಸಾಕ್ಷಿಯಾಗಿದೆ.