ಗುವಾಹಟಿ, ಏ. 13 (DaijiworldNews/AK): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಏಪ್ರಿಲ್ 10 ರಂದು ನಡೆದ ಪಂದ್ಯದ ವೇಳೆ ಸಿಬ್ಬಂದಿ ಮಾಡಿದ ಯಡವಟ್ಟು ಈಗ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನ ಸಂಕಷ್ಟ ಎದುರಾಗಿದೆ

ಆರ್ಆರ್ ಫ್ರಾಂಚೈಸಿ ವ್ಯವಸ್ಥಾಪಕ ರೋಮಿ ಭಿಂದರ್ಗೆ ಭ್ರಷ್ಟಾಚಾರಾ ವಿರೋಧಿ ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ನೋಟಿಸ್ ಜಾರಿಗೊಳಿಸಿದೆ.
ರಾಯಲ್ಸ್ ಫ್ರಾಂಚೈಸಿಯ ವ್ಯವಸ್ಥಾಪಕ ಭಿಂದರ್ ಮೊಬೈಲ್ ಫೋನ್ ಬಳಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದವು. ಇದನ್ನ ಸೂಕ್ಷ್ಮವಾಗಿ ಪರಿಗಣಿಸಿರುವ ಬಿಸಿಸಿಐ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಏಪ್ರಿಲ್ 10 ರಂದು ಆರ್ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಭರ್ಜರಿ ಜಯ ಸಾಧಿಸಿತ್ತು. ಆದ್ರೆ ಪಂದ್ಯದ ವೇಳೆ ತನ್ನ ಬ್ಯಾಟಿಂಗ್ ಮುಗಿಸಿದ್ದ ವೈಭವ್ ಸೂರ್ಯವಂಶಿ ಜೊತೆಗೆ ಡಗೌಟ್ನಲ್ಲಿ ಕುಳಿತಿದ್ದಾಗ ಭಿಂದರ್ ತನ್ನ ಫೋನ್ ಬಳಸುತ್ತಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮೊಬೈಲ್ ಬಳಸಲು ಅನುಮತಿ ಕೊಟ್ಟಿದ್ಯಾರು ಅಂತ ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಐಪಿಎಲ್ ಮಂಡಳಿಯ ಮಾಜಿ ಅಧ್ಯಕ್ಷ ಲಲಿತ್ ಮೋದಿ ಕೂಡ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಕ್ರಮಕ್ಕೆ ಮುಂದಾಗಿದೆ.