ಚೆನ್ನೈ, ಏ. 12 (DaijiworldNews/AA): ಐಪಿಎಲ್ 2026 ರ 18 ನೇ ಪಂದ್ಯವು ದೆಹಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಿತು. ಈ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿರಿಯ ಆಟಗಾರ ನಿತೀಶ್ ರಾಣಾ ಮತ್ತು ಬ್ಯಾಟಿಂಗ್ ಕೋಚ್ ವೇಣುಗೋಪಾಲ್ ರಾವ್ ಬೌಂಡರಿ ಲೈನ್ ಬಳಿ ಇದ್ದ ಅಂಪೈರ್ ಜೊತೆ ವಾಗ್ವಾದ ನಡೆಸಿದರು.

ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸಿಎಸ್ಕೆ 20 ಓವರ್ಗಳಲ್ಲಿ 212 ರನ್ ಕಲೆಹಾಕಿತು. ಬಳಿಕ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 18 ಓವರ್ಗಳಲ್ಲಿ 181 ರನ್ ಗಳಿಸಿದ್ದರು. ಅದರಂತೆ ಕೊನೆಯ 12 ಎಸೆತಗಳಲ್ಲಿ 31 ರನ್ಗಳು ಬೇಕಿದ್ದವು. ಈ ವೇಳೆ ಚೆನ್ನೈನ ವಿಪರೀತ ಸೆಕೆಯಿಂದಾಗಿ ಕ್ರೀಸ್ನಲ್ಲಿದ್ದ ಟ್ರಿಸ್ಟನ್ ಸ್ಟಬ್ಸ್ ಗ್ಲೌಸ್ ಬದಲಿಸಲು ಅಂಪೈರ್ ಬಳಿ ಮನವಿ ಮಾಡಿದ್ದರು. ಆದರೆ, ಆಟ ವಿಳಂಬವಾಗುತ್ತದೆ ಎಂಬ ಕಾರಣ ನೀಡಿ ಅಂಪೈರ್ ಇದಕ್ಕೆ ನಿರಾಕರಿಸಿದ್ದಾರೆ.
ಅಂಪೈರ್ ನಿರ್ಧಾರದಿಂದ ಅಸಮಾಧಾನಗೊಂಡ ಸ್ಟಬ್ಸ್, ಹಳೆಯ ಗ್ಲೌಸ್ನಲ್ಲೇ ಆಟ ಮುಂದುವರಿಸಿದರು. ಆದರೆ, ದುರಾದೃಷ್ಟವಶಾತ್ ಅದರ ಮುಂದಿನ ಎಸೆತದಲ್ಲೇ ಔಟಾದರು. ಇತ್ತ ಟ್ರಿಸ್ಟನ್ ಸ್ಟಬ್ಸ್ ಔಟಾಗಿ ಪೆವಿಲಿಯನ್ಗೆ ಮರಳುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಿರಿಯ ಆಟಗಾರ ನಿತೀಶ್ ರಾಣಾ ಮತ್ತು ಬ್ಯಾಟಿಂಗ್ ಕೋಚ್ ವೇಣುಗೋಪಾಲ್ ರಾವ್ ಬೌಂಡರಿ ಲೈನ್ ಬಳಿ ಇದ್ದ ಅಂಪೈರ್ ಜೊತೆ ವಾಗ್ವಾದ ನಡೆಸಿದ್ದಾರೆ.
'ಬೇರೆ ತಂಡಗಳಿಗೆ ಅವಕಾಶ ನೀಡುವಾಗ ನಮಗೆ ಯಾಕಿಲ್ಲ?' ಎಂದು ರಾಣಾ ಅಂಪೈರ್ ಬಳಿ ವಾಗ್ವಾದಕ್ಕಿಳಿದಿದ್ದಾರೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗಿದೆ. ಅಂಪೈರ್ ತೆಗೆದುಕೊಂಡ ಈ ನಿರ್ಧಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.