ಗುವಾಹಟಿ, ಏ. 11 (DaijiworldNews/TA) : ಇಂಡಿಯನ್ ಪ್ರೀಮಿಯರ್ ಲೀಗ್ 2026 ಟೂರ್ನಿಯ 16ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಬರ್ಸಪರ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್ಸಿಬಿ ನೀಡಿದ 201 ರನ್ಗಳ ಗುರಿಯನ್ನು ರಾಜಸ್ಥಾನ್ ಕೇವಲ 18 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಬೆನ್ನಟ್ಟಿತು.

ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಆರಂಭದಲ್ಲೇ ವೇಗಿ ಜೋಫ್ರಾ ಆರ್ಚರ್ ಫಿಲ್ ಸಾಲ್ಟ್ ವಿಕೆಟ್ ಪಡೆದು ಆಘಾತ ನೀಡಿದರು. ಮಧ್ಯಕ್ರಮದಲ್ಲಿ ನಾಯಕ ರಜತ್ ಪಾಟಿದಾರ್ 40 ಎಸೆತಗಳಲ್ಲಿ 63 ರನ್ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರೆ, ವಿರಾಟ್ ಕೊಹ್ಲಿ 16 ಎಸೆತಗಳಲ್ಲಿ 32 ರನ್ ಗಳಿಸಿದರು. ಇಂಪ್ಯಾಕ್ಟ್ ಆಟಗಾರ ವೆಂಕಟೇಶ ಅಯ್ಯರ್ 15 ಎಸೆತಗಳಲ್ಲಿ ಅಜೇಯ 29 ರನ್ ಸೇರಿಸಿದರು. ಹೀಗಾಗಿ ಆರ್ಸಿಬಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿತು.
ರಾಜಸ್ಥಾನ್ ಪರ ಬೌಲಿಂಗ್ನಲ್ಲಿ ಜೋಫ್ರಾ ಆರ್ಚರ್ ಮಿಂಚಿ 2 ವಿಕೆಟ್ ಪಡೆದರು. ಜೊತೆಗೆ ರವಿ ಬಿಷ್ಣೋಯ್ ಮತ್ತು ಬ್ರಿಜೇಶ್ ಶರ್ಮಾ ತಲಾ ಎರಡು ವಿಕೆಟ್ ಪಡೆದರು. ರವೀಂದ್ರ ಜಡೇಜಾ ಹಾಗೂ ಸಂದೀಪ್ ಶರ್ಮಾ ತಲಾ ಒಂದು ವಿಕೆಟ್ ಕಬಳಿಸಿದರು.
201 ರನ್ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್ ಆರಂಭದಲ್ಲೇ ಯಶಸ್ವಿ ಜೈಸ್ವಾಲ್ ವಿಕೆಟ್ ಕಳೆದುಕೊಂಡರೂ, ಬಳಿಕ ಯುವ ಆಟಗಾರ ವೈಭವ್ ಸೂರ್ಯವಂಶಿ ಸ್ಫೋಟಕ ಆಟ ಪ್ರದರ್ಶಿಸಿದರು. ಅವರು ಕೇವಲ 26 ಎಸೆತಗಳಲ್ಲಿ 78 ರನ್ (8 ಬೌಂಡರಿ, 7 ಸಿಕ್ಸರ್) ಬಾರಿಸಿದರು.
ಅವರಿಗೆ ಉತ್ತಮ ಬೆಂಬಲ ನೀಡಿದ ಧ್ರುವ್ ಜುರೆಲ್ 43 ಎಸೆತಗಳಲ್ಲಿ ಅಜೇಯ 81 ರನ್ ಗಳಿಸಿ ತಂಡದ ಗೆಲುವು ಖಚಿತಪಡಿಸಿದರು. ಈ ಜೋಡಿ ಎರಡನೇ ವಿಕೆಟ್ಗೆ 108 ರನ್ಗಳ ಮಹತ್ವದ ಜೊತೆಯಾಟ ನಿರ್ಮಿಸಿತು. ಕೊನೆಯಲ್ಲಿ ರವೀಂದ್ರ ಜಡೇಜಾ 25 ಎಸೆತಗಳಲ್ಲಿ ಅಜೇಯ 24 ರನ್ ಗಳಿಸಿ ತಂಡವನ್ನು ಗೆಲುವಿನ ಗುರಿಯತ್ತ ಮುನ್ನಡೆಸಿದರು.
ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಸತತ ನಾಲ್ಕನೇ ಜಯ ದಾಖಲಿಸಿದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಆವೃತ್ತಿಯ ಮೊದಲ ಸೋಲನ್ನು ಅನುಭವಿಸಿದೆ.