ಅಸ್ಸಾಂ, ಏ. 08 (DaijiworldNews/TA): ಗುವಾಹಟಿಯ ಬರ್ಸಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ 13ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 27 ರನ್ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಮಳೆಯ ಅಡಚಣೆಯಿಂದ ಪಂದ್ಯವನ್ನು 11 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು.

ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲಿಗೆ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪರ ಯುವ ಆಟಗಾರರಾದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ತಂಡಕ್ಕೆ ಸಿಡಿಲಬ್ಬರದ ಆರಂಭ ಒದಗಿಸಿದರು.
ದೀಪಕ್ ಚಹರ್ ಎಸೆದ ಮೊದಲ ಓವರ್ನಲ್ಲೇ 22 ರನ್ಗಳ ಸಿಡಿಲಾಟ ಕಂಡುಬಂದಿತು. ನಂತರ ಜಸ್ಪ್ರೀತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್ ಓವರ್ಗಳಲ್ಲೂ ಬಿರುಸಿನ ಬ್ಯಾಟಿಂಗ್ ಮುಂದುವರಿದ ಪರಿಣಾಮ ಕೇವಲ 3 ಓವರ್ಗಳಲ್ಲಿ ತಂಡದ ಮೊತ್ತ 50 ರನ್ ದಾಟಿತು.
ವೈಭವ್ ಸೂರ್ಯವಂಶಿ ಕೇವಲ 14 ಎಸೆತಗಳಲ್ಲಿ 39 ರನ್ ಬಾರಿಸಿ ಔಟಾದರು. ನಂತರ ಧ್ರುವ್ ಜುರೆಲ್ (2) ಬೇಗನೆ ವಿಕೆಟ್ ಕಳೆದುಕೊಂಡರು. ರಿಯಾನ್ ಪರಾಗ್ 20 ರನ್ಗಳ ಸಹಾಯ ನೀಡಿದರು. ಇನ್ನೊಂದೆಡೆ ಯಶಸ್ವಿ ಜೈಸ್ವಾಲ್ ಸ್ಫೋಟಕ ಆಟ ಮುಂದುವರೆಸಿ ಕೇವಲ 32 ಎಸೆತಗಳಲ್ಲಿ 4 ಸಿಕ್ಸ್ ಮತ್ತು 10 ಫೋರ್ಗಳ ನೆರವಿನಿಂದ ಅಜೇಯ 77 ರನ್ಗಳನ್ನು ಸಿಡಿಸಿದರು. ಈ ಭರ್ಜರಿ ಬ್ಯಾಟಿಂಗ್ನಿಂದ ರಾಜಸ್ಥಾನ್ ರಾಯಲ್ಸ್ ತಂಡವು 11 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 150 ರನ್ಗಳನ್ನು ಕಲೆಹಾಕಿತು.
151 ರನ್ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಜೋಫ್ರಾ ಆರ್ಚರ್ ಮೊದಲ ಓವರ್ನಲ್ಲೇ ರಯಾನ್ ರಿಕಲ್ಟನ್ (8) ವಿಕೆಟ್ ಕಿತ್ತುಕೊಂಡರು. ಸೂರ್ಯಕುಮಾರ್ ಯಾದವ್ (6), ರೋಹಿತ್ ಶರ್ಮಾ (5), ಹಾರ್ದಿಕ್ ಪಾಂಡ್ಯ (9) ಮತ್ತು ತಿಲಕ್ ವರ್ಮಾ (14) ಕ್ರಮವಾಗಿ ಔಟಾದರು. ಇದರೊಂದಿಗೆ ಮುಂಬೈ ತಂಡಕ್ಕೆ ಕೊನೆಯ 6 ಓವರ್ಗಳಲ್ಲಿ 105 ರನ್ಗಳ ಅವಶ್ಯಕತೆ ಎದುರಾಯಿತು.
ಈ ವೇಳೆ ಶೆರ್ಫೇನ್ ರದರ್ಫೋರ್ಡ್ ಮತ್ತು ನಮನ್ ಧೀರ್ ಪ್ರತಿರೋಧ ತೋರಿದರು. ಇಬ್ಬರೂ ಸೇರಿ 17 ಎಸೆತಗಳಲ್ಲಿ 47 ರನ್ಗಳ ಜೊತೆಯಾಟ ನಿರ್ಮಿಸಿದರು. ಆದರೆ ರದರ್ಫೋರ್ಡ್ (25) ಔಟಾದ ನಂತರ ಪಂದ್ಯ ಮತ್ತೆ ರಾಜಸ್ಥಾನ್ ಕಡೆ ತಿರುಗಿತು. ಕೊನೆಯ 18 ಎಸೆತಗಳಲ್ಲಿ 57 ರನ್ ಅಗತ್ಯವಿದ್ದರೂ, ಮುಂಬೈ ಇಂಡಿಯನ್ಸ್ ತಂಡವು 11 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್ಗಳಿಗೆ ಮಾತ್ರ ಸೀಮಿತವಾಯಿತು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡವು 27 ರನ್ಗಳ ಭರ್ಜರಿ ಜಯ ದಾಖಲಿಸಿತು.
ರಾಜಸ್ಥಾನ್ ರಾಯಲ್ಸ್ ತಂಡ :
ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ತುಷಾರ್ ದೇಶಪಾಂಡೆ, ಸಂದೀಪ್ ಶರ್ಮಾ.
ಮುಂಬೈ ಇಂಡಿಯನ್ಸ್ ತಂಡ :
ರೋಹಿತ್ ಶರ್ಮಾ, ರಯಾನ್ ರಿಕಲ್ಟನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಅಲ್ಲಾ ಗಝನ್ಫರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ.