ಚೆನ್ನೈ, ಏ. 04 (DaijiworldNews/TA): ಎಂ. ಎ. ಚಿದಂಬರಂ ಮೈದಾನದಲ್ಲಿ ನಡೆದ ಐಪಿಎಲ್ನ 7ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲು ಬ್ಯಾಟ್ ಮಾಡಿ 20 ಓವರ್ಗಳಲ್ಲಿ 209 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 18.4 ಓವರ್ಗಳಲ್ಲಿ 210 ರನ್ ಗಳಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಆದರೆ ಗೆಲುವಿನ ಖುಷಿಯ ನಡುವೆ ಪಂಜಾಬ್ ಕಿಂಗ್ಸ್ ತಂಡಕ್ಕೆ ದಂಡದ ಶಾಕ್ ಎದುರಾಗಿದೆ. ನಿಧಾನಗತಿಯ ಓವರ್ ರೇಟ್ ಕಾಪಾಡದ ಹಿನ್ನೆಲೆಯಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ.

ಐಪಿಎಲ್ ನಿಯಮಾವಳಿಯ ಪ್ರಕಾರ ನಿಗದಿತ ಸಮಯದಲ್ಲಿ ಓವರ್ಗಳನ್ನು ಪೂರ್ಣಗೊಳಿಸಲು ವಿಫಲವಾದುದು ಕನಿಷ್ಠ ಓವರ್ ರೇಟ್ ಅಪರಾಧವಾಗಿದ್ದು, ಇದೇ ತಪ್ಪನ್ನು ಮರುಕಳಿಸಿದ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚು ದಂಡ ವಿಧಿಸಲಾಗಿದೆ. ಇದಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲೂ ಇದೇ ತಪ್ಪಿಗೆ ಅಯ್ಯರ್ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು.
ಇದೀಗ ಮರು ತಪ್ಪು ಮಾಡಿದ ಕಾರಣ ನಾಯಕನಿಗೆ 24 ಲಕ್ಷ ರೂ. ದಂಡ ವಿಧಿಸಿರುವುದರ ಜೊತೆಗೆ, ಪ್ಲೇಯಿಂಗ್ ಇಲೆವೆನ್ನ ಎಲ್ಲಾ ಆಟಗಾರರಿಗೆ (ಇಂಪ್ಯಾಕ್ಟ್ ಪ್ಲೇಯರ್ ಸೇರಿ) ತಲಾ 6 ಲಕ್ಷ ರೂ. ಅಥವಾ ಪಂದ್ಯ ಶುಲ್ಕದ 25% ದಂಡ ವಿಧಿಸಲಾಗಿದೆ.
ಐಪಿಎಲ್ ನಿಯಮದ ಪ್ರಕಾರ, ಪ್ರತಿ ತಂಡವು 20 ಓವರ್ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ವಿಳಂಬವಾದರೆ ಮೈದಾನದಲ್ಲಿ ಫೀಲ್ಡರ್ಗಳ ಸಂಖ್ಯೆಯನ್ನು ಕಡಿಮೆ ಮಾಡುವಂತಹ ಶಿಕ್ಷೆಗಳೂ ಅನ್ವಯವಾಗುತ್ತವೆ. ಒಂದೇ ತಪ್ಪನ್ನು ಮೂರನೇ ಬಾರಿ ಮಾಡಿದರೆ ನಾಯಕನಿಗೆ 30 ಲಕ್ಷ ರೂ. ದಂಡ ಹಾಗೂ ಡಿಮೆರಿಟ್ ಪಾಯಿಂಟ್ ನೀಡಲಾಗುತ್ತದೆ. ಡಿಮೆರಿಟ್ ಪಾಯಿಂಟ್ಗಳು ನಿರ್ದಿಷ್ಟ ಮಿತಿಯನ್ನು ಮೀರಿದರೆ ಮಾತ್ರ ಪಂದ್ಯ ನಿಷೇಧದಂತಹ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.