ಕೋಲ್ಕತ್ತಾ, ಏ. 03 (DaijiworldNews/AA): ಅಂಜಿಕ್ಯ ರಹಾನೆ ನೇತೃತ್ವದ ಕೋಲ್ಕತ್ತ ನೈಟ್ ರೈಡರ್ಸ್(ಕೆಕೆಆರ್) ವಿರುದ್ಧ ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್) 65 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕೆಕೆಆರ್ ಈ ಐಪಿಎಲ್ ಸೀಸನ್ ಅಲ್ಲಿ ಸತತ ಎರಡನೇ ಸೋಲು ಕಂಡಿದೆ.

ಎಸ್ಆರ್ಹೆಚ್ ವಿರುದ್ಧದ ಪಂದ್ಯದಲ್ಲಿ ರಹಾನೆ ಅವರಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಕಂಡುಬಂದಿಲ್ಲ. 10 ಎಸೆತಗಳಲ್ಲಿ 8 ರನ್ ಗಳಿಸಿ ಔಟಾದರು. ಈ ಕಾರಣಕ್ಕಾಗಿ ಅವರನ್ನು ಟೀಕೆ ಮಾಡಲಾಗುತ್ತಿದೆ. ಆದರೆ ಅವರು ಈ ಟೀಕೆಗಳನ್ನು ತಳ್ಳಿಹಾಕಿದ್ದಾರೆ.
"2023ರಿಂದ ಇಲ್ಲಿಯವರೆಗೆ ನಾನು ಅತ್ಯುತ್ತಮ ಸ್ಟ್ರೈಕ್ ರೇಟ್ ಕಾಪಾಡಿಕೊಂಡು ಬಂದಿದ್ದೇನೆ. ನನ್ನ ಬಗ್ಗೆ ಮಾತನಾಡುತ್ತಿರುವವರು ಬಹುಶಃ ನನ್ನ ಆಟವನ್ನು ನೋಡುತ್ತಿಲ್ಲ. ನನ್ನ ವಿರುದ್ಧ ಅವರಿಗೆ ನಿರ್ದಿಷ್ಟ ಅಜೆಂಡಾ ಇದೆ. ನಾನು ಆಡುವುದನ್ನು ಅವರು ಇಷ್ಟಪಡುವುದಿಲ್ಲ. ನಾನು ಆಡುವುದನ್ನು ನೋಡಲು ಅವರಿಗೆ ಆಗುವುದಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
"ನನಗೆ ಸಿಕ್ಕಿರುವ ಯಶಸ್ಸಿನ ಪ್ರಮಾಣ ನೋಡಿ ಕೆಲವರಿಗೆ ನನ್ನ ಮೇಲೆ ಅಸೂಯೆ ಮೂಡಿರಬಹುದು. ನನಗೆ ಹೆಚ್ಚು ಚಿಂತೆ ಇಲ್ಲ. ನಾನು ಏನು ಮಾಡುತ್ತಿದ್ದೇನೆ ಎಂಬುದು ನಿಮಗೆಲ್ಲಾ ಗೊತ್ತು. ಒಂದೇ ಒಂದು ಕೆಟ್ಟ ಇನ್ನಿಂಗ್ಸ್.. ಕೆಟ್ಟ ಇನ್ನಿಂಗ್ಸ್ ಎಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಆಡಬೇಕು ಎಂಬುದು ನನಗೂ ಇತ್ತು. ಆದರೆ, ಕೆಲವೊಮ್ಮೆ ಬ್ಯಾಟ್ಸ್ಮನ್ ಆಗಿ ನಿಮಗೆ ಆ ಲಯ ಸಿಗುವುದಿಲ್ಲ. ಮಾತನಾಡುತ್ತಿರುವ ಜನರಿಗೆ, ಒಂದೋ ಅವರಿಗೆ ಆಟ ಅರ್ಥವಾಗುವುದಿಲ್ಲ ಅಥವಾ ಅವರು ನಾನು ಬೇರೆ ರೀತಿಯ ಇನ್ನಿಂಗ್ಸ್ ಆಡಬೇಕೆಂದು ಬಯಸುತ್ತಾರೆ" ಎಂದು ಹೇಳಿದ್ದಾರೆ.
"ಅಜಿಂಕ್ಯ ರಹಾನೆ ತನ್ನನ್ನು ಹಾಗೂ ತನ್ನ ಆಟವನ್ನು ಈ ಮಟ್ಟಕ್ಕೆ ಸಾಬೀತುಪಡಿಸುತ್ತಾರೆಂದು ಅವರು ನಿರೀಕ್ಷಿಸಿರಲಿಲ್ಲ. ಆದ್ದರಿಂದ ಅವರು ನನ್ನ ಬಗ್ಗೆ ಮಾತನಾಡುತ್ತಿರುವುದಕ್ಕೆ ಖುಷಿ ಇದೆ. ಅದು ನಕಾರಾತ್ಮಕವಾಗಿರಲಿ ಅಥವಾ ಸಕಾರಾತ್ಮಕವಾಗಿರಲಿ. ಅವರು ಮಾತನಾಡಲಿ" ಎಂದು ತಿಳಿಸಿದ್ದಾರೆ.