ಲಕ್ನೋ, ಏ. 02 (DaijiworldNews/AA): ಏಪ್ರಿಲ್ 1 ರಂದು ಇಂಡಿಯನ್ ಪ್ರೀಮಿಯರ್ ಲೀಗ್ನ 5ನೇ ಪಂದ್ಯವು ಲಕ್ನೋದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ನಡುವೆ ನಡೆದಿದ್ದು, ಈ ಪಂದ್ಯದ ವೇಳೆ ಅಭಿಮಾನಿಗಳ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಪಂದ್ಯ ನಡೆಯುತ್ತಿದ್ದಾಗ ಸ್ಟೇಡಿಯಂನ ಗ್ಯಾಲರಿಯಲ್ಲಿದ್ದ ಇಬ್ಬರು ವ್ಯಕ್ತಿಗಳ ನಡುವೆ ಮೊದಲು ಮಾತಿನ ಚಕಮಕಿ ಆರಂಭವಾಗಿದೆ. ಇದು ಕ್ಷಣಾರ್ಧದಲ್ಲೇ ವಿಕೋಪಕ್ಕೆ ತಿರುಗಿ, ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಅಭಿಮಾನಿಗಳ ನಡುವಿನ ಈ ಹೊಡೆದಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಇದನ್ನು 'WWE ಕುಸ್ತಿ' ಎಂದು ಕರೆದಿದ್ದಾರೆ.
ಇನ್ನು ಅಭಿಮಾನಿಗಳ ನಡುವಿನ ಹೊಡೆದಾಟ ವಿಕೋಪಕ್ಕೆ ತಿರುಗುತ್ತಿದಂತೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಗಲಾಟೆ ಮಾಡಿದವರನ್ನು ಸ್ಟೇಡಿಯಂನಿಂದ ಹೊರಹಾಕಲಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.